ಮಂಗಳೂರು: ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿ ಕೋವಿಡ್ ನಿಯಂತ್ರಣಕ್ಕೆ ಬರಲು ವೈಜ್ಞಾನಿಕ ಕ್ರಮಗಳ ಅಗತ್ಯವಿದೆ. ಕೊರೊನಾ ಗರಿಷ್ಠ ಮಟ್ಟದಲ್ಲಿದ್ದಾಗ ಜಿಲ್ಲಾಡಳಿತ ಯಾವ ರೀತಿ ಕೆಲಸ ಮಾಡುತ್ತೋ, ಅದನ್ನು ಈಗಲೇ ಮಾಡಿದಲ್ಲಿ ಜಿಲ್ಲೆಯಲ್ಲಿ ಲಾಕ್ಡೌನ್ ಆಗೋದನ್ನು ತಪ್ಪಿಸಲು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಪಂನಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಾಗುತ್ತಿರುವ ಕೊರೊನಾವನ್ನು ನಿಯಂತ್ರಣ ಮಾಡದೇ ಇದ್ದಲ್ಲಿ ನಾಳೆ ಇದರಿಂದ ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ ಕಾರಣ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ಗೆ ಕಡಿವಾಣ ಹಾಕಬೇಕು ಎಂದರು.
ಮೈಕ್ರೋ ಕಂಟೇನ್ಮೆಂಟ್ ಝೋನ್ ಕಡ್ಡಾಯ:
ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ಆಗುತ್ತಿರುವವರ ಸಂಖ್ಯೆ ಹೆಚ್ಚಿದ್ದರೂ ಸೋಂಕಿತರ ಮನೆಗಳಿರುವ ಪ್ರದೇಶವನ್ನು ಮೈಕ್ರೋ ಕಂಟೇನ್ಮೆಂಟ್ ಝೋನ್ ಮಾಡದಿರುವುದು ಸೋಂಕಿನ ಪ್ರಮಾಣ ಹೆಚ್ಚಳವಾಗಲು ಕಾರಣವಾಗುತ್ತಿದೆ. ಆದ್ದರಿಂದ ಸೋಂಕಿತರು ಹೋಮ್ ಐಸೋಲೇಷನ್ ಆಗಿದ್ದಲ್ಲಿ ಕಡ್ಡಾಯವಾಗಿ ಮುಂದಿನ ದಿನಗಳಲ್ಲಿ ಆ ಮನೆಯ ಸುತ್ತಮುತ್ತಲಿನ ನಾಲ್ಕು ಮನೆಗಳನ್ನು ಮೈಕ್ರೋ ಕಂಟೇನ್ಮೆಂಟ್ ಝೋನ್ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಕೇರ್ ಸೆಂಟರ್ ಚಿಕಿತ್ಸೆಗೆ ಮನವೊಲಿಸಬೇಕು:
ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ಗಿಂತ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯಲು ಸೋಂಕಿತರ ಮನವೊಲಿಕೆಯ ಅಗತ್ಯವಿದೆ. ಐಸೋಲೇಷನ್ನಲ್ಲಿ ಇದ್ದವರಿಗೆ ಎರಡು ಬಾರಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಆಕ್ಸಿಜನ್ ಟೆಸ್ಟಿಂಗ್ ಮಾಡಬೇಕು. ಆರೋಗ್ಯ ಕಾರ್ಯಕರ್ತರು ಅವರ ಮನೆಗೆ ತೆರಳಿ ತಪಾಸಣೆ ಮಾಡಬೇಕು. ಇದರಿಂದ ಸಿಬ್ಬಂದಿಗೆ ಸಮಸ್ಯೆಯಾಗಬಹುದು ಎಂದರು.
ಜಿಲ್ಲೆಗೆ ಆದ್ಯತೆ:
ರಾಜ್ಯದಲ್ಲಿ ಮುಂದಿನ ತಿಂಗಳು ಒಂದು ಕೋಟಿ ಕೋವಿಡ್ ಲಸಿಕೆ ತರಿಸಲಾಗುತ್ತಿದ್ದು, ಇದರಿಂದ ಲಸಿಕೆ ಕೊರತೆ ನೀಗಲಿದೆ. ಈ ಲಸಿಕೆಯಲ್ಲಿ ಕೇರಳ ರಾಜ್ಯದ ಗಡಿಯಲ್ಲಿರುವ ಜಿಲ್ಲೆಗೂ ಆದ್ಯತೆ ನೀಡಲಾಗುತ್ತದೆ ಎಂದರು.
ಡಿಸಿ, ಡಿಎಚ್ಒ ವಿರುದ್ಧ ಸಿಎಂ ಗರಂ:
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಮರ್ಪಕವಾಗಿ ಗ್ಲೌಸ್, ಮಾಸ್ಕ್ ಸರಬರಾಜು ಆಗದಿರುವ ಬಗ್ಗೆ ಶಾಸಕ ಖಾದರ್ ಸಭೆಯಲ್ಲಿ ಹೇಳಿದರು. ಈ ಬಗ್ಗೆ ಸಿಎಂ ಡಿಸಿ ಹಾಗೂ ಡಿಎಚ್ಒ ವಿರುದ್ಧ ಗರಂ ಆಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ನನಗೆ ಸ್ಪಷ್ಟನೆ ಬೇಡ. ಎಷ್ಟು ಮಾಸ್ಕ್, ಗ್ಲೌಸ್ ಅಗತ್ಯವಿದೆಯೋ, ಅದನ್ನು ಇಂದೇ ಸ್ಥಳೀಯವಾಗಿ ಖರೀದಿಸಿ ಸಂಜೆಯೊಳಗೆ ವರದಿ ನೀಡಿ ಎಂದು ಹೇಳಿದರು.
ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ದನಿ ಎತ್ತಿದ ಹರೀಶ್ ಪೂಂಜಾ:
ಸಭೆಯಲ್ಲಿ ಸಿಎಂ ಸಹಿತ ಎಲ್ಲ ಸಚಿವರಿಗೆ ತುಳು ಭಾಷೆಯಲ್ಲಿ ವಂದನೆ ಸಲ್ಲಿಸಿದ ಶಾಸಕ ಹರೀಶ್ ಪೂಂಜಾ, ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ದನಿಯೆತ್ತಿ ಎಲ್ಲರ ಗಮನ ಸೆಳೆದರು.
ಓದಿ: ರಾಜ್ಯದಲ್ಲಿಂದು1,857 ಮಂದಿಗೆ ಕೋವಿಡ್ ದೃಢ: 30 ಸೋಂಕಿತರ ಸಾವು
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಅಂಗಾರ ಎಸ್., ಕೋಟಾ ಶ್ರೀನಿವಾಸ್ ಪೂಜಾರಿ, ಸುನಿಲ್ ಕುಮಾರ್, ಡಿಸಿ ಡಾ.ಕೆ.ವಿ.ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.