ಮಂಗಳೂರು:ನಿನ್ನೆ ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಬಳಸಿದ ಕಾರಿನ ಮಾಹಿತಿಯನ್ನು ಪಡೆದುಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ನಿನ್ನೆ ರಾತ್ರಿ ದುಷ್ಕರ್ಮಿಗಳು ಸುರತ್ಕಲ್ನಲ್ಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಫಾಜಿಲ್ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ನಡೆದು ಒಂದು ದಿನವಾಗಿದ್ದು, ಆರೋಪಿಗಳು ಪತ್ತೆಯಾಗಿಲ್ಲ. ಆದರೆ, ಆರೋಪಿಗಳು ಬಳಸಿರುವ ಕಾರು ಪತ್ತೆಯಾಗಿದೆ. ಈ ಕಾರಣದಿಂದ ಕಾರಿನ ಮಾಲೀಕರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಪ್ರಕರಣ ನಡೆದ ಬೆನ್ನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫಾಜಿಲ್ ಬಗ್ಗೆ ಅಪಪ್ರಚಾರ ಮಾಡುವ ಸುದ್ದಿಗಳನ್ನು ಹಂಚಲಾಗಿತ್ತು. ಇದು ಮತ್ತಷ್ಟು ಗೊಂದಲವನ್ನು ಸೃಷ್ಟಿಸಲು ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಇಲಾಖೆಗೆ ಕೆಲವು ಮಾಹಿತಿಗಳು ಇದೆ. ಅದರ ಮೂಲಕ ಗ್ರೌಂಡ್ನಿಂದ ಮಾಹಿತಿ ಪಡೆದು ಆರೋಪಿಗಳ ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ. ಖಚಿತ ಮಾಹಿತಿ ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಯಾರೂ ಏನನ್ನೂ ಪೋಸ್ಟ್ ಮಾಡಬಾರದು. ಬೇರೆ ಬೇರೆ ಧರ್ಮದ ನಡುವೆ ದ್ವೇಷ ಮೂಡಿಸುವುದು ಸರಿಯಲ್ಲ ಎಂದಿದ್ದಾರೆ.
ಅಂತ್ಯಕ್ರಿಯೆ ಮುಗಿದಿದೆ, ಪರಿಸ್ಥಿತಿ ಶಾಂತವಾಗಿದೆ. ಅಧಿಕಾರಿಗಳು ಈಗ ತನಿಖೆಯತ್ತ ಗಮನಹರಿಸಿದ್ದಾರೆ. ಅವರು ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ. ಅಪರಾಧದ ಉದ್ದೇಶಕ್ಕಾಗಿ ಬಳಸಿದ ವಾಹನವನ್ನು ಕಂಡುಕೊಳ್ಳಲಾಗಿದೆ. ಶೀಘ್ರದಲ್ಲೇ ಪ್ರಕರಣವನ್ನು ಭೇದಿಸುತ್ತೇವೆ. ನಾಳೆ ಬೆಳಗ್ಗೆಯವರೆಗೆ ಸೆಕ್ಷನ್ 144 ಜಾರಿಯಲ್ಲಿದೆ. ನಾವು ಘಟನೆಯನ್ನು ಮೌಲ್ಯಮಾಪನ ಮಾಡುತ್ತೇವೆ ಈ ಸಂಬಂಧ ಮಾಹಿತಿ ನೀಡುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇದು ಪ್ರೇಮ ಪ್ರಕರಣ ಅಥವಾ ಕೋಮುವಾದದ ಕೋನವನ್ನು ನೀಡುವ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿವೆ. ನಾವು ಇನ್ನೂ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗದ ಕಾರಣ ನಿಖರವಾಗಿ ಯಾವ ಕಾರಣಕ್ಕೆ ಎಂಬ ಮಾಹಿತಿ ತಿಳಿದು ಬಂದಿಲ್ಲ.ಆರೋಪಿಗಳನ್ನು ವಿಚಾರಣೆಗೊಳಪಡಿಸುವವರೆಗೆ ಅವರ ಕಾರಣಗಳನ್ನು ನಾವು ಪ್ರತಿಕ್ರಿಯಿಸುವುದಕ್ಕೆ ಸಾಧ್ಯ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸುರತ್ಕಲ್: ಹುಟ್ಟೂರು ಮಂಗಳಪೇಟೆಯಲ್ಲಿ ಯುವಕ ಫಾಜಿಲ್ ಅಂತ್ಯಕ್ರಿಯೆ