ಬಂಟ್ವಾಳ: ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬುಧವಾರ ಸಂಜೆ ಅಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟಿದ್ದು, ಚಾಲಕ ಸಹಿತ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಉಮೈರಾ ಎಂಬ ಮಹಿಳೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಿ.ಸಿ.ರೋಡು ಕಡೆ ಬರುವ ಖಾಲಿ ಆಂಬ್ಯುಲೆನ್ಸ್‌ನಲ್ಲಿ ಬಂದು ಬಿ.ಸಿ.ರೋಡು - ಕೈಕಂಬದಲ್ಲಿ ಇಳಿದು ಅಲ್ಲಿಂದ ಗೂಡಿನಬಳಿ ನಿವಾಸಿಯೋರ್ವರ ಆಟೋ ರಿಕ್ಷಾದಲ್ಲಿ ತೆರಳಿದ್ದರು ಎನ್ನಲಾಗಿದೆ.
ಆಟೋ ರಿಕ್ಷಾ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬರುತ್ತಲೇ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಿಂದ ತಾಯಿಯ ಮಡಿಲಲ್ಲಿದ್ದ ಹಸುಗೂಸು ಹೊರಗೆಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ರಿಕ್ಷಾದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಉಮೈರಾ ಅವರಿಗೆ ನಾಲ್ಕು ಗಂಡು ಮಕ್ಕಳಿದ್ದು ಐದನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಮನೆ ಸೇರುವ ಮೊದಲೇ ಅಪಘಾತದಲ್ಲಿ ಮೃತಪಟ್ಟಿದೆ.