ಪುತ್ತೂರು: ರಾಜ್ಯದಲ್ಲಿ ಸುದ್ಧಿಯಲ್ಲಿರುವ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಕುರಿತಂತೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಓದಿ: ಜನರ ವಿಚಾರದಲ್ಲಿ ಸಚಿವ ಸುಧಾಕರ್ ಉಡಾಫೆಯ ಮಾತನ್ನಾಡಿದ್ದಾರೆ : ಎಸ್ಆರ್ಪಿ ಆರೋಪ
ಪುತ್ತೂರಿನಲ್ಲಿ ನಡೆದ ರಾಯಲ್ ಸಹಕಾರಿ ಸಂಘದ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸಚಿವರು ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಈವರೆಗೆ ಕೇಂದ್ರದ ಗಮನಕ್ಕೆ ಬಂದಿಲ್ಲ. ಅಲ್ಲದೆ ಈ ವಿಚಾರದ ಬಗ್ಗೆ ಕೇಂದ್ರ ನಾಯಕರು ಈವರೆಗೂ ಚರ್ಚೆಯನ್ನೂ ನಡೆಸಿಲ್ಲ ಎಂದರು.
ಜಾತಿ ಆಧಾರದಲ್ಲಿ ಮೀಸಲಾತಿ ಕೊಡುವುದಕ್ಕೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಅವಕಾಶಗಳು ದೊರೆಯಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಜಾತಿ ಆಧಾರದಲ್ಲಿ ಮೀಸಲಾತಿ ನೀಡಿದಲ್ಲಿ ಸಾಮಾಜಿಕ ಪರಿವರ್ತನೆ ಕಷ್ಟ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜಾತಿ ಆಧಾರಿತ ಮೀಸಲು ಕೇಳುವ ಹೊಸ ಪ್ರಕ್ರಿಯೆ ಶುರುವಾಗಿದ್ದು, ಈ ವ್ಯವಸ್ಥೆ ಸಾಮಾಜಿಕ ಪರಿವರ್ತನೆಗೆ ಮಾರಕವಾಗಿದೆ. ಮೀಸಲು ಪಡೆದು ಉನ್ನತ ಸ್ಥಾನಕ್ಕೆ ತಲುಪಿದವರು ತನ್ನ ಸಮಾಜದ ಏಳಿಗೆಯನ್ನು ಮರೆಯುತ್ತಾರೆ. ಸಮಾಜ ಹಿಂದೆ ಬಿದ್ದು, ವ್ಯಕ್ತಿ ಮಾತ್ರ ಮುಂದೆ ಹೋಗುವಂಥ ವ್ಯವಸ್ಥೆಗಳಾಗುತ್ತಿವೆ. ಇಂಥ ಘಟನೆಗಳು ಸಾಕಷ್ಟು ನಮ್ಮ ಮುಂದಿವೆ ಎಂದು ಸಚಿವರು ತಿಳಿಸಿದರು.
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಹಿರಿಯರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿದೆ ಎಂದರು.
ದೇಶದಲ್ಲಿ ಇಂಧನ ಬೆಲೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವೊಂದು ವ್ಯವಸ್ಥೆಗಳನ್ನು ಕಲ್ಪಿಸಲು ಈ ರೀತಿಯ ಹೆಚ್ಚಳ ಅನಿವಾರ್ಯವಾಗಿದೆ. ದೇಶದ 8 ಕೋಟಿ ಬಡ ಕುಟುಂಬಗಳಿಗೆ ಕೇಂದ್ರ ಉಚಿತವಾಗಿ ಗ್ಯಾಸ್ ವಿತರಿಸುತ್ತಿದೆ. ಈ ವ್ಯವಸ್ಥೆಗೆ ಹಣ ಹೊಂದಿಸುವ ಅಗತ್ಯವಿದೆ. ಈ ಕಾರಣಕ್ಕಾಗಿ ಇದ್ದವರಿಂದ ಇಲ್ಲದವರಿಗೆ ಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಇಂಧನ ಬೆಲೆ ಹೆಚ್ಚಳ ವಿಚಾರವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ಎಕ್ಸೈಸ್ ಡ್ಯೂಟಿ ಸೇರಿದಂತೆ ಇತರ ಮೂಲಗಳ ಮೂಲಕ ಬೆಲೆ ಏರಿಕೆ ತಡೆಗೆ ಪ್ರಯತ್ನ ನಡೆಯಲಿದೆ. ಕೇಂದ್ರ ಸರಕಾರ ಈಗಾಗಲೇ ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎಂದರು.
ಬ್ಯಾಂಕ್ಗಳಲ್ಲಿ ಎನ್ಪಿಎ ಅಕೌಂಟ್ ರಿಸ್ಟ್ರಕ್ಷರ್ ಮಾಡುವಂತೆ ಆರ್ಬಿಐ ಆದೇಶ, ಬ್ಯಾಂಕ್ಗಳ ಕಡೆಗಣನೆಗೆ ಪ್ರತಿಕ್ರಿಯಿಸಿದ ಅವರು, ಸಾಲ ಪಡೆದು ಕಟ್ಟಲಾಗದೆ ಆತ್ಮಹತ್ಯೆ ಮಾಡುವುದು ಒಳ್ಳೆಯ ನಿರ್ಧಾರವಲ್ಲ. ಸಾಲ ಕೊಟ್ಟದನ್ನು ವಾಪಸ್ ಕೇಳುವುದು ಬ್ಯಾಂಕ್ಗಳ ಜವಾಬ್ದಾರಿ, ಪುತ್ತೂರಿನ ಘಟನೆಯಲ್ಲೂ ಇದೇ ಆಗಿದೆ. ಮಹಿಳೆ ಆತ್ಮಹತ್ಯೆ ವಿಚಾರದಲ್ಲಿ ಯಾವುದು ನ್ಯಾಯ, ಯಾವುದು ಸರಿ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.
ಸಾಲ ಪಡೆದ ವ್ಯಕ್ತಿ ಉದ್ಯಮ ಮಾಡಿ ಅಭಿವೃದ್ಧಿ ಹೊಂದುವಂತೆ ಮಾಡಲು ಬ್ಯಾಂಕ್ ಸಾಲ ನೀಡುತ್ತದೆ. ಅದನ್ನು ಸರಿಯಾಗಿ ಕಟ್ಟದೇ ಹೋದಲ್ಲಿ ಬ್ಯಾಂಕು ದಿವಾಳಿಯಾಗುತ್ತದೆ. ಪುತ್ತೂರಿನಂಥ ಘಟನೆ ನಡೆದ ಬಳಿಕ ಬ್ಯಾಂಕ್ಗಳು ಸಾಲ ಕೊಡಲು ಹಿಂದೇಟು ಹಾಕುವ ಸಾಧ್ಯತೆಯೂ ಇದೆ. ಸಾಲ ಪಡೆದವನ ಸಾಲಕ್ಕೆ ರಿಲ್ಯಾಕ್ಸೇಷನ್ ಹಾಗೂ ಒನ್ ಟೈಂ ಸೆಟಲ್ಮೆಂಟ್ ಬಗ್ಗೆ ಕೇಂದ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.