ಮಂಗಳೂರು: ಕೃಷಿಯನ್ನೇ ಮಾಡದ, ಹತ್ತಾರು ವರ್ಷಗಳ ಕಾಲ ದೇಶವನ್ನು ಆಳಿದವರು, ಕೃಷಿಕರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಮತ ಬ್ಯಾಂಕ್ ನ ಉದ್ದೇಶವಿಲ್ಲದೇ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ಬಹಳ ವ್ಯವಸ್ಥಿತವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಾತುಕತೆ ಮೂಲಕ ಹೋರಾಟ ಮಾಡುತ್ತಿರುವ ರೈತರನ್ನು ಕೇಂದ್ರ ಸರ್ಕಾರ, ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಈಗಾಗಲೇ ಮಾಡುತ್ತಿದ್ದಾರೆ. ಪ್ರಯತ್ನಗಳು ಮುಂದುವರಿಯುತ್ತಲೇ ಇದೆ. ಆದರೆ, ರೈತರ ಹೆಸರಿನಲ್ಲಿ ರಾಜಕಾರಣ, ಗೊಂದಲ ಸೃಷ್ಟಿ ಮಾಡುವವರಿಗೆ ಇದು ಪರಿಹಾರ ಆಗಬೇಕು ಎಂಬ ಅಪೇಕ್ಷೆ ಇಲ್ಲ. ಆದರೆ, ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಕೃಷಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ. ರೈತ ಸ್ವಾವಲಂಬಿ ಆಗಬೇಕು. ಆತನ ಆದಾಯ ದ್ವಿಗುಣ ಆಗಬೇಕೆಂದು ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಆ ಕಾರಣಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ಕಿಸಾನ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅಂದು ಪ್ರಧಾನಿ ಮೋದಿಯವರು ದೇಶದ 9 ಕೋಟಿ ರೈತರ ಖಾತೆಗೆ ನೇರವಾಗಿ ತಲಾ 2000 ರೂಪಾಯಿಯಂತೆ 18 ಸಾವಿರ ಕೋಟಿ ರೂಪಾಯಿ ಜಮೆ ಮಾಡಲಾಗುತ್ತದೆ ಎಂದು ನಳಿನ್ ಕುಮಾರ್ ಹೇಳಿದರು.
ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಮೂಲಕ ಕ್ರಿಸ್ಮಸ್ ಆಚರಣೆ ನಡೆಸಲು ತೊಂದರೆಯಾಗುತ್ತಿದ್ದು, ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಬಿಜೆಪಿ ಸರ್ಕಾರ ಧಕ್ಕೆ ತರುವ ಕಾರ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಅವರು, ಈ ತರಹದ ವಿಚಾರಗಳನ್ನು ಜಾತಿ- ಧರ್ಮದ ದೃಷ್ಟಿಕೋನದಿಂದ ನೋಡಬಾರದು. ರೋಗಕ್ಕೆ ಯಾವುದೇ ಜಾತಿ, ಧರ್ಮ, ಭೇದವಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಪ್ರತಿಯೊಬ್ಬರ ಪ್ರಾಣವೂ ಶ್ರೇಷ್ಠವಾಗಿರುತ್ತದೆ. ಇದೀಗ ಕರಾವಳಿಯಲ್ಲಿ ಅತಿಹೆಚ್ಚು ಜಾತ್ರೆಗಳು, ಯಕ್ಷಗಾನಗಳು, ದೀಪೋತ್ಸವಗಳು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ನಾವು ಡಬ್ಲ್ಯೂಹೆಚ್ಒ ನಿಯಮಕ್ಕನುಗುಣವಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೊಂದು ಕಡೆಗಳಲ್ಲಿ ವಿಮಾನ ಯಾನವನ್ನೇ ರದ್ದುಪಡಿಸಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಅತೀ ಹೆಚ್ಚು ದೇಶಗಳಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಸಂದರ್ಭ ಎದುರಾಗಿದೆ. ಅಲ್ಲಿಯೂ ಕ್ರಿಸ್ಮಸ್ ಆಚರಣೆ ಇದೆ ಎಂದು ಹೇಳಿದರು.
ಜೆಡಿಎಸ್ ಅನ್ನು ಎನ್ಡಿಎ ಅಡಿಗೆ ತರುವ ಪ್ರಯತ್ನಗಳಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿ, ಇಂತಹ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ, ಅನಿವಾರ್ಯತೆಯೂ ಇಲ್ಲ. ಬಿಜೆಪಿ ಸರಕಾರ ಪಕ್ಷದ ಸಂಘಟನೆಯ ಆಧಾರದಲ್ಲಿ ನಡೆಯುತ್ತಿದೆ. ಇಂತಹ ಯಾವುದೇ ಮಾತುಕತೆಗಳು ನಡೆದಿಲ್ಲ. ಇದು ಕಪೋಲಕಲ್ಪಿತ ವಿಚಾರಗಳು ಎಂದು ಹೇಳಿದರು.