ಮಂಗಳೂರು (ದಕ್ಷಿಣಕನ್ನಡ): ನಗರದ ಬಜಾಲ್ ಎಂಬಲ್ಲಿ ಹಟ್ಟಿಗೆ ನುಗ್ಗಿ ದನ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೊಟ್ಟಾರಿಗುಡ್ಡೆ ನಿವಾಸಿ ಮಹಮ್ಮದ್ ಅಶ್ಫಕ್ (22), ಅಡ್ಡೂರು ನಿವಾಸಿ ಅಝರುದ್ದೀನ್(31), ಜಲ್ಲಿಗುಡ್ಡೆ ಬಜಾಲ್ ಪಡ್ಪು ನಿವಾಸಿ ಸುಹೈಲ್(19), ಬಜಾಲ್ ಪಕ್ಕಲಡ್ಕ ನಿವಾಸಿ ಮೊಹಮ್ಮದ್ ಅಫ್ರೀನ್(25), ಬಜಾಲ್ ಕಟ್ಟಪುಣಿ ನಿವಾಸಿ ಶಾಹೀದ್(19) ಎಂದು ಗುರುತಿಸಲಾಗಿದೆ.
ಇಲ್ಲಿನ ಬಜಾಲ್ ನಿವಾಸಿ ಅಶ್ವಿನ್ ಎಂಬವರು ದನಕರುಗಳನ್ನು ಸಾಕಿಕೊಂಡಿದ್ದು, ಜುಲೈ 20ರಂದು ಸಂಜೆ ಎಂದಿನಂತೆ ದನಗಳನ್ನು ತಮ್ಮ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದರು. ಆದರೆ, ಜು. 21ರ ಬೆಳಗ್ಗಿನ ಜಾವ ಹಟ್ಟಿಯಲ್ಲಿ ದನಗಳು ಕೂಗುತ್ತಿರುವುದು ಕೇಳಿ ಬಂದಿದೆ. ತಕ್ಷಣ ಅಶ್ವಿನ್ ಅವರು ಹೊರಗೆ ಬಂದು ನೋಡಿದಾಗ ಹಟ್ಟಿಯಲ್ಲಿದ್ದ ಒಂದು ದನ ಹೊರಗೆ ಬಂದು ನಿಂತಿದ್ದು, ಮತ್ತೊಂದು ಹಸು ಕಳವಾಗಿದ್ದು ಕಂಡುಬಂದಿದೆ.
ಈ ಬಗ್ಗೆ ಅಶ್ವಿನ್, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಸದ್ಯ ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿರುವ ಮಾರುತಿ ಕಾರು, ಕತ್ತಿ, ಹಗ್ಗಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಲೂಧಿಯಾನ.. ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ 6 ವರ್ಷದ ಬಾಲಕ ಸಾವು