ಸುರತ್ಕಲ್: ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ಅಸ್ವಸ್ಥಗೊಂಡಿದ್ದನ್ನು ಮನಗಂಡು ಬಸ್ನ ನಿರ್ವಾಹಕರೊಬ್ಬರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.
ಸುರತ್ಕಲ್‌ನ ಶಾನ್ ಸರ್ವೀಸ್ ಬಸ್ನ ನಿರ್ವಾಹಕ ಗಣೇಶ್ ನ.16ರ ಬೆಳಗ್ಗೆ ಬಜಪೆ ಕೈಕಂಬ ಮಾರ್ಗವಾಗಿ ಸಂಚರಿಸುವ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಸ್ನಲ್ಲಿ ಉತ್ತರಪ್ರದೇಶದ ವಾರಣಾಸಿ ನಿವಾಸಿ ರಾಜೇಶ್ ಚೌಹಾಣ್( 40) ಎಂಬುವರು ಪ್ರಯಾಣಿಸುತ್ತಿದ್ದರು.
ಬಸ್ ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿ ಬರುವಾಗ ರಾಜೇಶ್ ಚೌಹಾಣ್ ಧಿಡೀರ್ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಟಿಕೆಟ್ ಕಲೆಕ್ಷನ್ ಕೆಲಸವನ್ನು ಚಾಲಕ ರಮೇಶ್ ಅವರಿಗೆ ವಹಿಸಿದ ನಿರ್ವಾಹಕ ಅಸ್ವಸ್ಥಗೊಂಡ ಪ್ರಯಾಣಿಕನನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಆದರೆ, ಆರೋಗ್ಯ ಸ್ಥಿತಿ ಕೈ ಮೀರಿದ್ದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ತಕ್ಷಣ ಆಂಬುಲೆನ್ಸ್ ನಲ್ಲಿ ತಾವೇ ವೆಚ್ಚ ಭರಿಸಿ ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ, ಚಿಕಿತ್ಸೆಗೆ ಸ್ಪಂದಿಸದೆ ರಾಜೇಶ್ ಚೌಹಾಣ್ ಮೃತಪಟ್ಟಿದ್ದಾರೆ. ಬಳಿಕ ಘಟನೆ ಕುರಿತು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.