ಸುಳ್ಯ(ದಕ್ಷಿಣ ಕನ್ನಡ): ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ 2ನೇ ತರಗತಿ ವಿದ್ಯಾರ್ಥಿ, ಕುಂಟಿಕಾನ ನಿವಾಸಿ ಮೋಕ್ಷಿತ್ ಕೆ ಸಿ ಎಂಬ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮೋಕ್ಷಿತ್ ಎಂದಿನಂತೆ ಶಾಲೆಗೆ ಬಂದಿದ್ದಾನೆ. ಮಧ್ಯಾಹ್ನದ ಹೊತ್ತಿಗೆ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಶಿಕ್ಷಕರು ದೂರವಾಣಿ ಮೂಲಕ ಪೋಷಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಂದೆ ಚಂದ್ರಶೇಖರ ಆಚಾರ್ಯ ಶಾಲೆಗೆ ಬಂದಿರುವ ಸಂದರ್ಭದಲ್ಲೇ ಬಾಲಕ ನಿಂತಲ್ಲಿಯೇ ಕುಸಿದು ಬಿದ್ದ. ಬಾಲಕನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ, ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಜೀವ ಉಳಿಸಲು ಸತತವಾಗಿ ಪ್ರಯತ್ನಿಸಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ. ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಚಂದ್ರಶೇಖರ ಆಚಾರ್ಯ ಅವರು ತನ್ನ ಪುತ್ರ ಓದುವ ಶಾಲೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷರಾಗಿದ್ದಾರೆ. ಪತ್ನಿ ಗೀತಾ ಮತ್ತು ಹಿರಿಯ ಸಹೋದರ ಅಕ್ಷಯ್ ಹಾಗೂ ಬಂಧುಗಳನ್ನು ಈ ಮಗು ಅಗಲಿದ್ದಾನೆ.
ಈಟಿವಿ ಭಾರತದ ಜೊತೆಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, "ಈಗಾಗಲೇ ಬಾಲಕನನ್ನು ಪರಿಶೀಲನೆ ನಡೆಸಿದ ಆಸ್ಪತ್ರೆಯಿಂದ ವರದಿ ಕೇಳಿದ್ದೇವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹಿಂದೆ ಆತನಿಗೆ ಯಾವುದೇ ಇತರ ಕಾಯಿಲೆಗಳಿಲ್ಲ. ಕಲಿಕೆ ಸೇರಿದಂತೆ ಇತರ ಶಾಲಾ ಚಟುವಟಿಕೆಗಳಲ್ಲೂ ಚುರುಕಾಗಿದ್ದ ಎಂದು ತಿಳಿದುಬಂದಿದೆ. ಚಿಕ್ಕ ಮಕ್ಕಳಿಗೂ ಹೃದಯಾಘಾತ, ಕಿಡ್ನಿ ಸ್ಟೋನ್‌ಗಳಂತಹ ಕಾಯಿಲೆಗಳು ಬರುವ ಸಾಧ್ಯತೆಗಳು ಇವೆ. ಈ ಮಗುವಿಗೂ ಹೃದಯಾಘಾತವಾಗಿರುವ ಬಗ್ಗೆ ಪರಿಶೀಲನೆ ನಡೆಸಿದ ತಜ್ಞ ವ್ಯೆದ್ಯರು ಮಾಹಿತಿ ನೀಡಿದ್ದಾರೆ" ಎಂದರು.
ಇದನ್ನೂ ಓದಿ: ಫ್ಯಾನ್ಗೆ ನೇಣು ಬಿಗಿದುಕೊಂಡರೂ ಹೋಗಲ್ಲ ಜೀವ: ಮಾರ್ಕೆಟ್ಗೆ ಬಂದಿದೆ ಸೇಫ್ ಫ್ಯಾನ್ ಡಿವೈಸ್..!