ಮಂಗಳೂರು: ಮಂಗಳೂರಿನ ಮಾಲ್ ವೊಂದರಲ್ಲಿ ಹಿಂದೂರಾಷ್ಟ್ರದ ಬಗ್ಗೆ ಮಾತನಾಡಿದ ಯುವಕನಿಗೆ ಗುಂಪುಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಒಟ್ಟು ಐದು ಮಂದಿಯನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ ಪಿ ಎಸ್ ಹರ್ಷ ತಿಳಿಸಿದ್ದಾರೆ.
ಮಂಜುನಾಥ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಐವರಲ್ಲಿ ಓರ್ವ ಬಾಲಾಪರಾಧಿಯಾಗಿದ್ದಾನೆ. ಅಬ್ದುಲ್ ರಹಿಮ್ ಸಾದ್, ಮುಹಿಯ್ಯುದ್ದೀನ್ ಸಫ್ವಾನ್, ಫರಾನ್ ಫಾರೂಕ್, ಮುಹಮ್ಮದ್ ಮರ್ಝಕ್ ಬಂಧಿತರು. ಇವರೆಲ್ಲರೂ ವಿದ್ಯಾರ್ಥಿಗಳಾಗಿದ್ದು ಮಾಲ್ ನಲ್ಲಿ ಮಾತನಾಡುತ್ತಿದ್ದ ಮಂಜುನಾಥ್ ಗೆ ಥಳಿಸಿದ್ದರು. ಮಂಜುನಾಥ್ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಯುವತಿಯರನ್ನು ಚುಡಾಯಿಸುವ ಹಾಗೂ ಪ್ರಶ್ನಿಸಿದಾಗ ಹಲ್ಲೆ ನಡೆಸುವ ಪ್ರಕರಣಗಳನ್ನು ಸಹಿಸಲು ಬಿಜೆಪಿ ಸರ್ಕಾರದಲ್ಲಿ ಅವಕಾಶವಿಲ್ಲ. ಮತಾಂಧರನ್ನು ಮಟ್ಟ ಹಾಕಲು ಸರ್ಕಾರ ಬದ್ದವಾಗಿದೆ ಎಂದು ಆಶ್ವಾಸನೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.