ಮಂಗಳೂರು: ಸಮಾಜದ ಸ್ವಾಸ್ಥ್ಯ ಕದಡುವ ರೀತಿಯಲ್ಲಿ ಮಂಗಳೂರು ನಗರದ ಮೂರು ದೈವಸ್ಥಾನಗಳ ಹುಂಡಿಯಲ್ಲಿ ನೋಟಿನ ಮೇಲೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ ಹಾಗೂ ವಸ್ತು ಕಂಡು ಬಂದಿರುವುದು ಖಂಡನೀಯ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಆಗ್ರಹಿಸಿದ್ದಾರೆ.
ಈ ಕೃತ್ಯ ಅಕ್ಷಮ್ಯ ಅಪರಾಧವಾಗಿದ್ದು, ಯಾವುದೇ ಧರ್ಮದ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರುವಂತೆ ನಡೆದುಕೊಳ್ಳುವುದು ಸರಿಯಲ್ಲ. ಇದು ಅವಿವೇಕಿಗಳ ಹಾಗೂ ಹೇಡಿಗಳ ಕೃತ್ಯ. ಇದರಿಂದ ಈ ಕೃತ್ಯ ಎಸಗಿದವರ ವಿಕೃತ ಮನಸ್ಸು ಎಂತಹದ್ದು ಎಂದು ತಿಳಿದು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ವೀಕ್ಷಕರಿಗೆ ಅವಕಾಶ ಯಾವಾಗ?
ಇನ್ನೊಂದು ಧರ್ಮದ ಧಾರ್ಮಿಕ ನಂಬಿಕೆಗೆ ಮಸಿ ಬಳಿಯುವ ಇರಾದೆಯಿಂದ ಹಾಗೂ ಸಮಾಜದ ಶಾಂತಿ, ಕೋಮುಸಾಮರಸ್ಯ ಕದಡಲು ಈ ರೀತಿಯ ಕೃತ್ಯ ಎಸಗಲಾಗಿದೆ. ಇದು ಸಾಮಾಜಿಕ ದ್ರೋಹವಾಗಿದ್ದು, ಇಂತಹ ಘಟನೆಗಳು ಮತ್ತೆ ನಡೆಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಒತ್ತಾಯಿಸಿದ್ದಾರೆ.