ಬಂಟ್ವಾಳ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿವೃತ್ತ 60 ಶಿಕ್ಷಕರಿಗೆ ಸನ್ಮಾನ ಹಾಗೂ ಸಾಧಕ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
2019ನೇ ಸಾಲಿನ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತರಾದ ತಾರಾನಾಥ ಕೈರಂಗಳ, ದೊಡ್ಡಕೆಂಪಯ್ಯ, ತ್ರಿವೇಣಿ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಅನುಷ್ಠಾನ ಸಮಿತಿ ಆಯ್ಕೆ ಮಾಡಿದ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅಬುಬಕ್ಕರ್ ಸಿದ್ದೀಕ್, ರಾಜಗೋಪಾಲ ಜೋಷಿ, ಜೆಸಿಂತಾ ಥೆರೆಸಾ ಲೊಬೊ, ಅಬುಬಕ್ಕರ್ ಅಶ್ರಫ್ ಅವರನ್ನು ಗೌರವಿಸಲಾಯಿತು. ಜೊತೆಗೆ ನಿವೃತ್ತಿ ಹೊಂದಿದ 60 ಶಿಕ್ಷಕರನ್ನು ಸತ್ಕರಿಸಲಾಯಿತು.
ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಕೆಲಸ ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಕೋವಿಡ್ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಶಿಕ್ಷಕರು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್, ರವೀಂದ್ರ ಕಂಬಳಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ನಾರಾಯಣ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪಸ್ಥಿತರಿದ್ದರು.