ಬಂಟ್ವಾಳ( ಮಂಗಳೂರು) : ಬಂಟ್ವಾಳ ನಗರ ಠಾಣಾ ಪೊಲೀಸರು ಸುಮಾರು 40 ಕೆ.ಜಿ.ಯಷ್ಟು ಗಾಂಜಾ ದಾಸ್ತಾನಿರಿಸಿದ ಪ್ರಕರಣವೊಂದನ್ನು ಪತ್ತೆಹಚ್ಚಿದ್ದಾರೆ.
ಇಲ್ಲಿನ ಕೈಕಂಬದ ಪರ್ಲಿಯಾ ಎಂಬಲ್ಲಿನ ಮನೆಯಲ್ಲಿ ಗಾಂಜಾ ಸಂಗ್ರಹಿಸಿದ್ದ ಆರೋಪದಡಿ ಅಹಮ್ಮದ್ ಸಾಬೀತ್ (30) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನಿಂದ 40 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಅನ್ವಯ ಮಂಗಳವಾರ ಮಧ್ಯಾಹ್ನ ಈ ದಾಳಿ ನಡೆದಿದೆ. ಈ ವೇಳೆ ಮನೆಯ ಶೌಚಾಲಯದ ಮೇಲ್ಬಾಗದಲ್ಲಿದ್ದ ಗೋಣಿ ಚೀಲಗಳಲ್ಲಿ ಸುಮಾರು 40 ಕೆಜಿಯಷ್ಟು ಗಾಂಜಾ ದಾಸ್ತಾನು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ ರೂ.19,97,400 ಎಂದು ಅಂದಾಜಿಸಲಾಗಿದೆ.
ಪರ್ಲಿಯಾದ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಈತನ ಬಳಿ ಗಾಂಜಾ ದಾಸ್ತಾನಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಐ ಸಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಎಸ್ಐ ಅವಿನಾಶ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.