ಮಂಗಳೂರು: ಕೊರೊನಾ ಸೋಂಕು ಚಿಕಿತ್ಸೆಗೆ ಅಗತ್ಯವಿರುವ ಗ್ಲುಕೋಮೀಟರ್, ಬಿಪಿ ಮೋನಿಟರ್, ಥರ್ಮೋಸ್ಕ್ಯಾನರ್, ಮಾಸ್ಕ್, ಹಾಗೂ ಸ್ಯಾನಿಟೈಸರ್ ಗಳನ್ನೊಳಗೊಂಡ ಒಟ್ಟು ರೂ.14.80 ಲಕ್ಷ ರೂ. ಮೌಲ್ಯದ ವೈದ್ಯಕೀಯ ಕಿಟ್‍ಗಳನ್ನು ಬ್ಯಾಂಕ್ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕಿ ಮತ್ತು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಅವರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಸ್ತಾಂತರಿಸಿದರು.
ಈ ಬಗ್ಗೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಗ್ರಾಪಂ ಟಾಸ್ಕ್ ಪೋರ್ಸ್ ಸಮಿತಿಗಳು ಸಹಾ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದೆ. ಬ್ಯಾಂಕ್ ಆಫ್ ಬರೋಡಾದ ವತಿಯಿಂದ ನೀಡಲಾಗಿರುವ ವೈದ್ಯಕೀಯ ಕಿಟ್‍ಗಳಲ್ಲಿ ಗ್ಲುಕೋಮೀಟರ್, ಬಿಪಿ ಮೋನಿಟರ್, ಥರ್ಮೋಸ್ಕ್ಯಾನರ್ಗಳನ್ನು ಎ.ಎನ್.ಎಂ ನರ್ಸ್ಗಳಿಗೆ ವಿತರಿಸಲಾಗುತ್ತದೆ ಎಂದು ಹೇಳಿದರು.
ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ಸಂಬಂಧಪಟ್ಟ ಪಂಚಾಯತಿಗಳಲ್ಲಿ ನೀಡಲಾಗುತ್ತದೆ. ಇದರಿಂದ ಆಸ್ಪತ್ರೆಗಳಲ್ಲಿ ಹಾಗೂ ಹೋಮ್ ಕ್ವಾರಂಟೈನ್‍ಗಳಲ್ಲಿ ಇರುವಂತಹ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿಗೆ 15 ಕ್ಕೂ ಹೆಚ್ಚು ಜಿಲ್ಲೆಗಳಿಂದ ಕೊರೊನಾ ಸೋಂಕಿತರಲ್ಲದೇ ಇತರ ರೋಗಿಗಳು ಚಿಕಿತ್ಸೆಗೆಂದು ಬರುತ್ತಿದ್ದು, ಉತ್ತಮ ಚಿಕಿತ್ಸೆ ನೀಡುವುದರೊಂದಿಗೆ ಸ್ಪಂದಿಸುತ್ತಿದೆ. ಅದರೊಂದಿಗೆ ಜಿಲ್ಲಾಡಳಿತವು ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿಯೂ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುತ್ತಿದೆ ಎಂದರು.
ಇದನ್ನು ಓದಿ:ವಿಶೇಷ ಪ್ಯಾಕೇಜ್ : ಧನಸಹಾಯ ಪಡೆಯುವ ವಯೋಮಿತಿ ಇಳಿಸುವಂತೆ ಯಕ್ಷಗಾನ ಕಲಾವಿದರ ಮನವಿ