ಮಂಗಳೂರು: ಇತ್ತೀಚೆಗೆ ಜಾನುವಾರು ಸಾಗಿಸುವಾಗ ಹಲ್ಲೆ ನಡೆಸಿದವರ ಮೇಲೆ ಸಣ್ಣಪುಟ್ಟ ಕೇಸ್ ದಾಖಲಿಸಿ ಬಿಡುಗಡೆಗೊಳಿಸಿರುವ ಉರ್ವ ಪೊಲೀಸರು, ಜಾನುವಾರು ಸಾಗಣೆಯ ಸೂಕ್ತ ದಾಖಲೆ ಒದಗಿಸಿದರೂ ನನ್ನ ವಿರುದ್ಧ ಅಕ್ರಮ ಗೋಸಾಗಣೆ ದೂರು ದಾಖಲಿಸಿದ್ದಾರೆ ಎಂದು ಹಲ್ಲೆಗೊಳಗಾಗಿರುವ ಮಹಮ್ಮದ್ ಹನೀಫ್ ಆರೋಪಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಕೀಲರನ್ನು ಸಂಪರ್ಕಿಸಿ ಠಾಣೆಗೆ ತೆರಳಿ ನನಗಾಗಿರುವ ಅನ್ಯಾಯದ ಬಗ್ಗೆ ಹೇಳಿಕೆ ನೀಡಿದ್ದೇನೆ. ಅದನ್ನು ಠಾಣೆಯಲ್ಲಿ ಸ್ವೀಕರಿಸಲಾಗಿದ್ದು, ಆ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿ ಹಲ್ಲೆಗೈದಿರುವ ಎಲ್ಲರಿಗೂ ಕಾನೂನಿನಡಿಯಲ್ಲಿ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.
ರಾಣಿಬೆನ್ನೂರಿನಿಂದ 10 ಜಾನುವಾರುಗಳನ್ನು ತಂದಿದ್ದು, ಇದಕ್ಕೆ ಪಶುವೈದ್ಯರ ದಾಖಲೆಗಳನ್ನು ಪಡೆದೇ ಸಾಗಣೆ ಮಾಡುತ್ತಿದ್ದೆ. ಅದರಲ್ಲಿ 6 ಜಾನುವಾರುಗಳನ್ನು ಮಾರಾಟ ಮಾಡಿ ರವಿವಾರ ನಸುಕಿನ ಜಾವ ಉಳಿದ ನಾಲ್ಕು ಎಮ್ಮೆ- ಕರುವನ್ನು ಸಾಗಿಸುವಾಗ ನಗರದ ಕೊಟ್ಟಾರ ಬಳಿಯ ಇನ್ಫೋಸಿಸ್ ನಿಂದ 200 ಮೀ. ಅಂತರದಲ್ಲಿ ಬಜರಂಗದಳದ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭ 10-15 ಮಂದಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಲ್ಲದೆ ವಾಹನವನ್ನು ಸಂಪೂರ್ಣ ಜಖಂ ಗೊಳಿಸಲಾಗಿದೆ. ಅವರಲ್ಲಿ ಮೂವರು ನನ್ನಲ್ಲಿ ದಾಖಲೆಗಳು ಇವೆ ಎಂದರೂ, ತಲ್ವಾರ್, ಮರದ ತುಂಡು, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಜೊತೆಗೆ ಕಿಸೆಯಲ್ಲಿದ್ದ 7,800 ರೂ.ವನ್ನು ಕಳ್ಳತನ ಮಾಡಿದ್ದಾರೆ ಎಂದು ಮಹಮ್ಮದ್ ಹನೀಫ್ ದೂರಿದರು.
ಅದೇ ಸಮಯಕ್ಕೆ ಉರ್ವ ಠಾಣೆಯ ಪೊಲೀಸ್ ಸಿಬ್ಬಂದಿ ಬಂದ ಬಳಿಕ ಇವರೆಲ್ಲರೂ ಓಡಿ ಹೋಗಿದ್ದಾರೆ. ಪೊಲೀಸರು ಈ ಸಂದರ್ಭ ನನ್ನನ್ನು ಹಾಗೂ ವಾಹನವನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು, ನನ್ನ ಯಾವುದೇ ಹೇಳಿಕೆಯನ್ನು ಪಡೆದುಕೊಳ್ಳದೆ ಅವರೇ ಸಿದ್ಧಪಡಿಸಿದ ಎಫ್ಐಆರ್ ಪ್ರತಿಗೆ ನನ್ನಿಂದ ಸಹಿ ಹಾಕಿಸಿಕೊಂಡಿದ್ದಾರೆ. ಈ ಸಂದರ್ಭ ನನ್ನಲ್ಲಿ ದಾಖಲೆಗಳಿದ್ದರೂ ಸೆಕ್ಷನ್ 379 ಗೋಕಳವು ಪ್ರಕರಣ ದಾಖಲಿಸಿದ್ದಾರೆ. ಆದರೆ ನನ್ನ ಮೇಲೆ ಹಲ್ಲೆ ಮಾಡಿದವರು 10-15 ಮಂದಿ ಇದ್ದರೂ ಪೊಲೀಸರು ಕೇವಲ 6 ಮಂದಿ ಮೇಲೆ ಸಣ್ಣಪುಟ್ಟ ಕೇಸ್ ದಾಖಲಿಸಿ ಠಾಣೆಯಿಂದಲೇ ಬಿಡುಗಡೆಗೊಳಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಹರಿಹಾಯ್ದರು.