ಪುತ್ತೂರು: ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಅಗರಿಯಲ್ಲಿ ಮತಾಂಧ ಮುಸ್ಲಿಂ ವರನೊಬ್ಬ ದೈವ ಭಕ್ತರ ಶ್ರದ್ಧಾ ಬಿಂದು ಸ್ವಾಮಿ ಕೊರಗಜ್ಜನ ವೇಷ ಧರಿಸಿ ಅಪಮಾನ ಮಾಡಿದ ಘಟನೆ ನಡೆದಿತ್ತು. ಇದಷ್ಟೇ ಅಲ್ಲ ಕರಾವಳಿಯಲ್ಲಿ ನಡೆಯುತ್ತಿರುವ ಹಿಂದೂ ಧರ್ಮದ ಅಪಹಾಸ್ಯ ಮತ್ತು ಹಿಂದೂ ಸಮಾಜವನ್ನು ಕೆಣಕುವ ಷಡ್ಯಂತ್ರದ ವಿರುದ್ಧ ಮಂಗಳವಾರ ಕಾಸರಗೋಡು, ದ.ಕ. ಮತ್ತು ಉಡುಪಿ ಜಿಲ್ಲೆಗಳ 1 ಸಾವಿರ ಶ್ರದ್ಧಾ ಕೇಂದ್ರಗಳಲ್ಲಿ ಹಿಂದೂಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ಇದನ್ನೂ ಓದಿ: ಮಂಗಳೂರು: ಕೊರಗಜ್ಜ ದೈವದ ವೇಷ ಧರಿಸಿ ಅವಮಾನ.. ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ ವರ
ಸೋಮವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮೂಹಿಕ ಪ್ರಾರ್ಥನೆಗೆ ಹೋರಾಟ ನಿಲ್ಲುವುದಿಲ್ಲ. ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಮಂಜೇಶ್ವರ ಕಡೆಯ ಎಲ್ಲ ಆರೋಪಿಗಳನ್ನು ಬಂಧಿಸುವವರೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ವಿರಮಿಸುವುದಿಲ್ಲ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಿಟ್ಲ ಪರಿಸರದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಇಲ್ಲಿ ಆಗುವ ಅನಾಹುತಗಳಿಗೆ ಪೊಲೀಸರೇ ಕಾರಣ ಹೊರತು ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲ ಎಂದು ದೂರಿದರು.
ಪೊಲೀಸರಿಗೆ ಆರೋಪಿಗಳು ಯಾರೆಂದು ಗೊತ್ತಿದೆ. ಮಂಗಳವಾರ ಸಂಜೆಯೊಳಗೆ ಕೊಳ್ನಾಡು ಗ್ರಾಮದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸದಿದ್ದರೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಗಳ ಮನೆಗೆ ನುಗ್ಗಿ ಅವರನ್ನು ಎಳೆದು ತರಬೇಕಾದೀತು. ಇದರಿಂದ ಉದ್ಭವಿಸುವ ಎಲ್ಲಾ ಸಮಸ್ಯೆಗಳಿಗೆ ಪೊಲೀಸ್ ಇಲಾಖೆ ಕಾರಣ. ಹಿಂದೂ ಧರ್ಮವನ್ನು ಅವಹೇಳನ ಮಾಡುವ, ಹಿಂದೂ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹಸಂತಡ್ಕ ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ಶೀಘ್ರವಾಗಿ ಜಾಮೀನು ಸಿಗುವ ಸೆಕ್ಷನ್‍ಗಳನ್ನು ಮತಾಂಧರ ವಿರುದ್ಧ ಹಾಕಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕಠಿಣ ಕಾನೂನು ಕ್ರಮಗಳನ್ನು ಪೊಲೀಸರು ತೆಗೆದುಕೊಳ್ಳಬೇಕು. ಹಿಂದೂಗಳ ಸಹನೆಯನ್ನು ಪರೀಕ್ಷಿಸುವುದು ಬೇಡ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಭಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪದ್ಮನಾಭ ಕಟ್ಟೆ, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ ತೆಂಕಿಲ ಉಪಸ್ಥಿತರಿದ್ದರು.
ಇದನ್ನೂ ಓದಿ: 'ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ': ಕೊರಗಜ್ಜ ದೈವದ ನುಡಿ