ಮಂಗಳೂರು : ಸುರತ್ಕಲ್ ಪೇಟೆಯಲ್ಲಿ ಶುಕ್ರವಾರ ಮುಂಜಾನೆ ಜೆಸಿಬಿ ಬಳಸಿ ಎಟಿಎಂ ಯಂತ್ರ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ದಿ ಸೌತ್ ಇಂಡಿಯನ್ ಬ್ಯಾಂಕ್‌ನ ಶಾಖಾ ಮ್ಯಾನೇಜರ್ ರೋಹಿತ್ ಎಂಬುವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದಿ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯು ಸುರತ್ಕಲ್ ಪೇಟೆಯ ವಿದ್ಯಾದಾಯಿನಿ ಶಾಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‌ನ ಪಶ್ಚಿಮದ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿದೆ. ಇದು ಪೊಲೀಸ್ ಠಾಣೆಯಿಂದ ಕೇವಲ 200 ಮೀ. ಅಂತರದಲ್ಲಿದೆ. ಕಳ್ಳರು ಬಳಸಿದ್ದ ಜೆಸಿಬಿ ಪಡುಬಿದ್ರಿಯಿಂದ ಕದ್ದಿರುವುದಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಬ್ಯಾಂಕ್ ಶಾಖೆಯ ಪಕ್ಕದ ಕೋಣೆಯಲ್ಲಿ ಎಟಿಎಂ ಇದ್ದಿದ್ದು, ಕಳ್ಳರು ಜೆಸಿಬಿ ಬಳಸಿ ಮುಂಭಾಗದ ಗಾಜು ಒಡೆದಿದ್ದಾರೆ. ಅಷ್ಟರಲ್ಲಿ ಸಿಸಿಟಿವಿ ಸೆಂಟ್ರಲ್ ಟೀಮ್ನಿಂದ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಬಂದಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲೇ ಕಳ್ಳರು ಪರಾರಿಯಾಗಿದ್ದಾರೆ. ಶುಕ್ರವಾರ ಮುಂಜಾನೆ 2.13 ರ ವೇಳೆಗೆ ಘಟನೆ ನಡೆದಿದ್ದು, ಇಬ್ಬರು ಕಳ್ಳರು ಮುಖಕ್ಕೆ ಕವಚ ಹಾಕಿಕೊಂಡು ಕೃತ್ಯ ನಡೆಸಿದ್ದಾರೆ. ಕಳ್ಳತನಕ್ಕೆ ಬಳಸಿದ ಜೆಸಿಬಿ ಜೋಕಟ್ಟೆ ಬಳಿ ಪತ್ತೆಯಾಗಿದೆ.
ಇದನ್ನೂ ಓದಿ : ಪಕ್ಕದಲ್ಲೇ ಇದ್ದ ಪಿಕಪ್ ವಾಹನ ಕದ್ದು, ಅದರಲ್ಲೇ ಎಟಿಎಂ ಯಂತ್ರ ಸಾಗಿಸಿದ ಕಳ್ಳರು
ಇನ್ನು ಈ ಎಟಿಎಂ ಹೆದ್ದಾರಿ ಪಕ್ಕದಲ್ಲಿದ್ದು, ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದರೂ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ. ಎಟಿಎಂನಲ್ಲಿ 2 ಲಕ್ಷ ರೂ. ಇತ್ತು. ಸೈರನ್ ಮೊಳಗಿ ಕಳ್ಳರ ಪ್ರಯತ್ನ ವಿಫಲವಾದ ಕಾರಣ ದೊಡ್ಡಮಟ್ಟದ ನಷ್ಟ ತಪ್ಪಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಡಿಸಿಪಿ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳ, ಬೆರಳಚ್ಚು ತಂಡ ಆಗಮಿಸಿ ಸಾಕ್ಷಿ ಕಲೆ ಹಾಕಿದೆ. ಸುರತ್ಕಲ್ ಪಿಐ ಮಹೇಶ್ ಪ್ರಸಾದ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ATM ಯಂತ್ರದಿಂದ 24 ಲಕ್ಷ ರೂಪಾಯಿ ದೋಚಿದ್ದ ನಾಲ್ವರು ಆರೋಪಿಗಳ ಬಂಧನ
ನಾಲ್ವರ ಬಂಧನ : ಜುಲೈ 5 ರಂದು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಯಂತ್ರದಿಂದ 24 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಆರೋಪದಡಿ ಕಸ್ಟೋಡಿಯನ್ ಸಿಬ್ಬಂದಿ ಸಹಿತ ನಾಲ್ವರು ಆರೋಪಿಗಳನ್ನು ಜುಲೈ 16 ರಂದು ಪೊಲೀಸರು ಬಂಧಿಸಿದ್ದರು. ಸಿಎಂಎಸ್ ಕಸ್ಟೋಡಿಯನ್ ಕಂಪನಿ ಸಿಬ್ಬಂದಿ ಅರುಳ್, ಆತನ ಸಹಚರರಾದ ನದೀಂ, ಮಹೇಶ್ ಹಾಗೂ ಶ್ರೀರಾಮ್ ಬಂಧಿತ ಆರೋಪಿಗಳು. ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ : ಡಿಪಾಸಿಟ್ ಬಟನ್ ಒತ್ತದ ಕಾರಣ ಮಿಷನ್ನಲ್ಲೇ ಉಳಿದಿದ್ದ 52 ಸಾವಿರ ರೂ. ದೋಚಿದ ವ್ಯಕ್ತಿ : ಸಿಸಿಟಿವಿ ವಿಡಿಯೋ