ಮಂಗಳೂರು (ದಕ್ಷಿಣ ಕನ್ನಡ): MDMA(ಮೀಥೈಲೆನೆಡಿಯಾಕ್ಸಿ ಮೆಥಾಂಫೆಟಮೈನ್) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ ಒಟ್ಟು 70,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಮೊಹಮ್ಮದ್ ಇರ್ಷಾದ್ (28) ಬಂಧಿತ ಆರೋಪಿ.
ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯ ಭಟ್ರಗುಡ್ಡೆ ಎಂಬಲ್ಲಿ ಓರ್ವ ವ್ಯಕ್ತಿ ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ 70 ಸಾವಿರ ರೂ. ಮೌಲ್ಯದ 12 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ 12 ಗ್ರಾಂ MDMA ಮಾದಕ ವಸ್ತು, 1 ಮೊಬೈಲ್ ಪೋನ್, ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮಂಗಳೂರಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಡಿಕೇರಿಯ ಮೂವರು ಅರೆಸ್ಟ್
ಮಾದಕ ವಸ್ತು ಮಾರಾಟ ಮಡಿಕೇರಿ ಮೂಲದ ಮೂವರು ಅರೆಸ್ಟ್: ಮಂಗಳೂರಿನಲ್ಲೇ ಮೊನ್ನೆ ತಾನೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ನೀರು ಎಂಬಲ್ಲಿ ಲಾಡ್ಜ್ವೊಂದರ ಬಳಿ ಬಂಧಿತ ಮೂವರು ಆರೋಪಿಗಳು ಅಕ್ರಮವಾಗಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಂಗಳೂರು ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದರು. ಇವರ ಬಳಿಯಿಂದ ಒಟ್ಟು 75 ಸಾವಿರ ರೂ. ಮೌಲ್ಯದ 15 ಗ್ರಾಂ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಡಿಕೇರಿಯ ಪ್ರಮೋದ್ ಎಮ್.ಜಿ ಯಾನೆ ಡಿಸ್ಕ್ (30), ಮೊಹಮ್ಮದ್ ರಾಶೀದ್ ಎಂ.ಝಡ್ ಯಾನೆ ರಾಶಿ (41),ದರ್ಶನ್ ಎಸ್ (24) ಬಂಧಿತರು.