ಪುತ್ತೂರು : ಪುತ್ತೂರು ಎಪಿಎಂಸಿ ವತಿಯಿಂದ ಅಡಿಕೆ ಅಡಮಾನ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ 50 ಸಾವಿರ ಸಾಲ ವಿತರಿಸುವ ಯೋಜನೆ ಜಾರಿಗೆ ತಂದಿದೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.
ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿ ರೈತ ವರ್ಗದ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನಲೆ ರೈತರ ಸಹಾಯಕ್ಕೆ ನಿಂತಿರುವ ಪುತ್ತೂರು ಎಪಿಎಂಸಿ 3 ತಿಂಗಳ ಅವಧಿಗೆ 50 ಸಾವಿರ ರೂ. ಶೂನ್ಯ ಬಡ್ಡಿಯಲ್ಲಿ ಹಣ ನೀಡಲು ನಿರ್ಧಾರ ಕೈಗೊಂಡಿದೆ. 50 ಸಾವಿರ ಸಾಲ ಪಡೆಯುವ ರೈತರು 3.50 ಕ್ವಿಂಟಾಲ್ ಅಡಿಕೆಯನ್ನು ಎಪಿಎಂಸಿ ದಾಸ್ತಾನು ಮಳಿಗೆಯಲ್ಲಿಡಬೇಕು.
3 ತಿಂಗಳ ನಂತರ ಈ ಸಾಲವನ್ನು ನವೀಕರಣ ಮಾಡುವ ಚಿಂತನೆಯನ್ನೂ ಮಾಡಲಾಗಿದೆ. ಇದರಿಂದ ರೈತ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಹಾಗೂ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿರ್ದೇಶನದಂತೆ ನಡೆಸಲಾಗುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು. ಸೋಮವಾರದಿಂದ ಈ ಅಡಿಕೆ ಸಾಲ ನೀಡಲು ಆರಂಭಿಸಲಾಗಿದೆ. ಇದಕ್ಕೆ ರೈತರಿಂದ ಉತ್ತಮ ಸ್ಪಂದನೆಯೂ ದೊರೆತಿದೆ. ಈಗಾಗಲೇ 8 ಮಂದಿ ರೈತರು ತಮ್ಮ ಅಡಿಕೆ ದಾಸ್ತಾನು ಇರಿಸಿ ಸಾಲ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಲ್ಲಿಯೂ ₹15 ಸಾವಿರ ಅಡಿಕೆ ಅಡಮಾನವಿಟ್ಟು ಸಾಲ ನೀಡುವ ಯೋಜನೆ ಅನುಷ್ಠಾನಗೊಂಡಿದೆ. ಆದರೆ, ಅಲ್ಲಿ ಬಡ್ಡಿ ಸಹಿತ ಸಾಲ ನೀಡಲಾಗುತ್ತಿದೆ. ಎಪಿಎಂಸಿ ವತಿಯಿಂದ ರೈತರ ಅನುಕೂಲಕ್ಕಾಗಿ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಕಡಬ ಎಪಿಎಂಸಿಯಲ್ಲೂ ಇದೇ ರೀತಿಯಲ್ಲಿ ರೈತರಿಗೆ ಸಾಲ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕ್ಯಾಂಪ್ಕೋ ಅಡಕೆ ಖರೀದಿ ಆರಂಭ : ಜಿಲ್ಲೆಯ 6 ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರಗಳಲ್ಲಿ ಸೋಮವಾರ ರೈತರಿಂದ ಅಡಿಕೆ ಖರೀದಿ ನಡೆಸಲಾಯಿತು. ರೈತರ ಸಮಸ್ಯೆ ಪರಿಹಾರಕ್ಕಾಗಿ ತಿಂಗಳಿಗೆ 1 ಕ್ವಿಂಟಾಲ್ ಅಡಿಕೆ ಅಥವಾ ರೂ.25 ಸಾವಿರ ಮೌಲ್ಯದ ಅಡಿಕೆ ಖರೀದಿ ನಡೆಸಲು ಕ್ಯಾಂಪ್ಕೋ ನಿರ್ಧಾರ ಕೈಗೊಂಡಿದೆ.