ಪುತ್ತೂರು(ಮಂಗಳೂರು) : ಅನ್ಯಮತೀಯರಿಗೆ ಜಾತ್ರೆಗಳಲ್ಲಿ ವ್ಯಾಪಾರ ನಿರ್ಬಂಧದ ಬಳಿಕ ಇದೀಗ ಪುತ್ತೂರಿನಲ್ಲಿ ಅನ್ಯಮತೀಯರಿಗೆ ಮತ್ತೊಂದು ನಿರ್ಬಂಧ ಹೇರಲಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಹಿಂದೂ ಆಟೋಗಳನ್ನೇ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ಆಟೋಗಳಿಗೆ ಭಗವಾ ಧ್ವಜ ನೀಡಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಭಗವಾಧ್ವಜ ಇದ್ದ ಆಟೋಗಳನ್ನೇ ಹಿಂದೂ ಭಕ್ತಾಧಿಗಳು ಆಯ್ಕೆ ಮಾಡಬೇಕೆಂದು ಹಿಂಜಾವೇ ಮನವಿಯಲ್ಲಿ ತಿಳಿಸಿದೆ.
ಜಾತ್ರೆಯ ನೆಪದಲ್ಲಿ ಅನ್ಯಮತೀಯರಿಂದ ಹಿಂದೂ ಹೆಣ್ಣುಮಕ್ಕಳಿಗೆ ತೊಂದರೆ ಮಾಡಲಾಗುತ್ತಿದೆ. ಜಾತ್ರೆಗೆ ಬರುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪ ಮಾಡಿ ಈ ಅಭಿಯಾನ ಆರಂಭಿಸಲಾಗಿದೆ. ಏಪ್ರಿಲ್ 10 ರಿಂದ 20ರವರೆಗೆ ಆಟೋಗಳು ಕೇಸರಿ ಧ್ವಜವನ್ನು ಹಾಕಿ ಓಡಾಟ ನಡೆಸುವಂತೆಯೂ ಹಿಂಜಾವೇ ಮನವಿಯಲ್ಲಿ ಉಲ್ಲೇಖ ಮಾಡಿದೆ
ಹಿಂದೂ ಹೆಣ್ಣುಮಕ್ಕಳನ್ನು ಹಿಂದೂಗಳೇ ರಕ್ಷಿಸಬೇಕಾದ ಸಮಯ ಬಂದಿದೆ. ಹಿಂದುತ್ವದ ಹೆಸರಿನಲ್ಲಿ ಬಂದ ಸರ್ಕಾರ ಹಿಂದೂಗಳಿಗೆ ಸಹಕಾರ ನೀಡುತ್ತಿಲ್ಲ. ಹಿಂದೂಗಳ ಮೇಲೆಯೇ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಹಿಂದೂ ಸಂಘಟನೆಗಳು ಯಾರ ಮೇಲೂ ದೌರ್ಜನ್ಯ ಎಸಗಿಲ್ಲ.
ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸವನ್ನು ಸಂಘಟನೆಗಳು ನಿರಂತರ ಮಾಡಲಿವೆ. ಈ ಅಭಿಯಾನದ ಒಂದು ಭಾಗವಾಗಿ ಆಟೋಗಳಿಗೆ ಭಗವಾ ಧ್ವಜ ಹಾಕಿಸಿ ಹಿಂದುತ್ವ ಉಳಿಸುವ ಕಾರ್ಯ ಮಾಡಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡರು ಹೇಳಿದ್ದಾರೆ.