ಮಂಗಳೂರು (ದ.ಕ) : ಕೊರೊನಾ ವೈರಸ್ ಹಾವಳಿ ಬಳಿಕ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳ ಕಲಿಕೆಗೆ ವ್ಯವಸ್ಥೆ ಮಾಡಿ ಕೊಡಲಾಗಿತ್ತು. ಆದರೆ, ಆನ್‌ಲೈನ್ ತರಗತಿಗಳು ನಿಜಕ್ಕೂ ವಿದ್ಯಾರ್ಥಿಗಳ ಕಲಿಕೆಗೆ ಉಪಯುಕ್ತವಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದೆ.
ಸರ್ಕಾರ ಆನ್‌ಲೈನ್ ತರಗತಿ ಆರಂಭಕ್ಕೆ ಸೂಚಿಸಿದ ಬಳಿಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇದು ವಿದ್ಯಾರ್ಥಿಗಳ ಕಲಿಕೆಗೆ ಪರ್ಯಾಯ ವ್ಯವಸ್ಥೆ ಎಂದು ಬಿಂಬಿಸಲಾಗಿತ್ತು. ಆದರೆ, ಹಲವು ಶಿಕ್ಷಕರ ಪ್ರಕಾರ ಈ ಆನ್‌ಲೈನ್ ತರಗತಿಗಳನ್ನು ವಿದ್ಯಾರ್ಥಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ಯುಕೆಜಿಯಿಂದ 9ನೇ ತರಗತಿವರೆಗೆ ಇದೀಗ ಆನ್‌ಲೈನ್ ತರಗತಿಗಳು ನಡೆಯುತ್ತಿವೆ.
ಇದಕ್ಕಾಗಿ ಪೋಷಕರು ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್ಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ಸಿದ್ದಪಡಿಸಿ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್ ಗ್ರೂಪ್ಗೆ ಕಳುಹಿಸುತ್ತಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಲೈವ್ ಕ್ಲಾಸ್ಗಳು ನಡೆದ್ರೆ ಹೆಚ್ಚಿನ ಶಾಲೆಗಳಲ್ಲಿ ರೆಕಾರ್ಡ್ ಮಾಡಿ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತಿದೆ. ‘
ಲೈವ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಮೇಲ್ಮಟ್ಟದಲ್ಲಿ ಗಮನಿಸಲು ಸಾಧ್ಯವಾದ್ರೆ, ರೆಕಾರ್ಡ್ ಮಾಡಿ ವಿದ್ಯಾರ್ಥಿಗಳಿಗೆ ಪಠ್ಯ ಕಳುಹಿಸಿದ್ರೆ ವಿದ್ಯಾರ್ಥಿಗಳನ್ನು ಗಮನಿಸಲು ಸಾಧ್ಯವಿಲ್ಲ. ಆನ್‌ಲೈನ್ ತರಗತಿಗಳನ್ನು ಪಡೆಯುವ ಹೆಚ್ಚಿನ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಗಂಭೀರವಾಗಿ ಕಲಿಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆಸಕ್ತಿಯಿರುವ ಕೆಲವೇ ವಿದ್ಯಾರ್ಥಿಗಳು ತರಗತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ನಡೆಸುವಾಗ ನೈಜ ತರಗತಿಗಳು ನಡೆಯುವ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ಆನ್‌ಲೈನ್ ತರಗತಿ ನಡೆಯುತ್ತಿದ್ದರೂ ಶಿಕ್ಷಕರು ಗಮನಿಸುತ್ತಿದ್ದಾರೆ ಎಂಬ ಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾಗಿದೆ.
ಆನ್‌ಲೈನ್ ತರಗತಿಗಳು ವಿದ್ಯಾರ್ಥಿಗಳಲ್ಲಿ ಪಾಠದ ಮಧ್ಯೆ ಪ್ರಶ್ನಿಸುವುದು, ಫೇಸ್ ಟು ಫೇಸ್ ಕಾಂಟ್ಯಾಕ್ಟ್ ಇಲ್ಲದಿರುವುದು ಮೊದಲಾದ ನ್ಯೂನತೆಗಳಿವೆ. ಆದರೆ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಬಂದ್ರೆ ಇದನ್ನು ಆನ್‌ಲೈನ್ ತರಗತಿಗಳಲ್ಲಿಯೂ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಇದನ್ನೂ ಓದಿ: ಹತ್ತು ದಿನ ಕಳೆದ್ರೂ ಬಾರದ ಕೊರೊನಾ ಪರೀಕ್ಷಾ ವರದಿ : ವಿದ್ಯಾರ್ಥಿಗಳು ಅತಂತ್ರ