ಬಂಟ್ವಾಳ (ಉತ್ತರ ಕನ್ನಡ): 70 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಮಗ ಮತ್ತು ಸೊಸೆ ಶೌಚಗೃಹದಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕರಾವಳಿಸೈಟ್ ಎಂಬಲ್ಲಿ ನಡೆದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಗಿರಿಜಾ ಎಂಬಾಕೆಯೇ ತನ್ನ ಮಗ ಹರಿರಾಮ್ ಮತ್ತು ಸೊಸೆ ಪೂಜಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, 2020ರ ಜನವರಿ 10ರಿಂದ 2022ರ ಜುಲೈ 6ರವರೆಗೆ ಕೂಡಿ ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಗ ಮತ್ತು ಸೊಸೆಯೊಂದಿಗೆ ವಾಸವಾಗಿದ್ದ ವೃದ್ಧೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜಪದವು ಎಂಬಲ್ಲಿರುವ ಅವರ ಮನೆಯ ಜಗುಲಿಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಗಾಯಕ್ಕೆ ಮಗ ಮತ್ತು ಸೊಸೆ ಚಿಕಿತ್ಸೆ ಕೊಡಿಸದ ಕಾರಣ ನೋವಿನಿಂದ ನಡೆಯಲು ಸಾಧ್ಯವಾಗದೆ ಹಾಸಿಗೆಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿತ್ತು.
ಅಲ್ಲದೇ, ಯಾವುದೇ ಆರೈಕೆ ಮಾಡದೇ ಅವರ ಮನೆಯ ಶೌಚಗೃಹದಲ್ಲಿ ಹಾಕಿ ಒಂದು ಹೊತ್ತು ಊಟ ಮತ್ತು ಚಾ ಕೂಡಾ ನೀಡುತ್ತಿರಲಿಲ್ಲ. ಜೊತೆಗೆ 'ಮುದುಕಿ ನೀನು ಸಾಯುವುದೂ ಇಲ್ಲ' ಎಂಬುದಾಗಿ ಬೈಯುವುದು, ಹಸಿವೆಯಿಂದ ಊಟ ಕೇಳಿದರೆ 'ಮುದುಕಿ, ನಿನಗೆ ಊಟ ಕೊಡುವುದಿಲ್ಲ, ಮಣ್ಣು ತಿಂದು ಸಾಯಿ' ಎಂದು ಸೊಸೆ ಹಿಂಸೆಕೊಡುತ್ತಿದ್ದರು ಎಂದ ಆರೋಪ ಕೇಳಿ ಬಂದಿದೆ.
ಈ ವಿಷಯ ಹಿರಿಯ ನಾಗರಿಕ ಸಮಿತಿಗೆ ಗೊತ್ತಾಗಿ, ಸಮಿತಿಯ ಸದಸ್ಯರು ಕೂಡಲೇ ಸ್ಥಳಕ್ಕೆ ಹೋಗಿ ಶೌಚಗೃಹದಿಂದ ವೃದ್ಧೆಯನ್ನು ಹೊರಗೆ ಕರೆತಂದು ಉಪಚರಿಸಿದ್ದಾರೆ. ನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ: ಇತ್ಯರ್ಥ ಆಗಿರುವ ಪ್ರಕರಣಕ್ಕೆ ಹಣ ಪೀಕಿದ ಆರೋಪ.. ಎಸಿಬಿ ಬಲೆಗೆ ಪಿಎಸ್ಐ