ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಶರಣಾಗತಿಯ ಹಿನ್ನೆಲೆಯಲ್ಲಿ ನಗರದ ಚಿಲಿಂಬಿಯಲ್ಲಿರುವ ಆದಿತ್ಯರಾವ್ ಮನೆಗೆ ಕೆನರಾ ಬ್ಯಾಂಕ್ ಅಧಿಕಾರಿ ಮತ್ತು ಕೆನರಾ ಬ್ಯಾಂಕ್ ಆಫೀಸರ್ ಅಸೋಸಿಯೇಷನ್ ಕಾರ್ಯದರ್ಶಿ ರಮೇಶ್ ನಾಯಕ್ ಭೇಟಿ ನೀಡಿ ಆದಿತ್ಯನ ಸಹೋದರ ಅಕ್ಷತ್ ರಾವ್ ಹಾಗೂ ಅವರ ತಂದೆಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ.
ಆರೋಪಿ ಆದಿತ್ಯ ರಾವ್ ಸಹೋದರ ಅಕ್ಷತ್ ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಅಣ್ಣನ ವಿಷಯವಾಗಿ ನೊಂದುಕೊಂಡಿರುವ ಹಿನ್ನೆಲೆಯಲ್ಲಿ ತಾವು ಭೇಟಿ ನೀಡುತ್ತಿರುವುದಾಗಿ ರಮೇಶ್ ನಾಯಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಧ್ಯಮ ಜೊತೆಗೆ ಮಾತನಾಡಿದ ಅವರು, ಆದಿತ್ಯ ರಾವ್ ಸಹೋದರ ಅಕ್ಷತ್ ರಾವ್ ತುಂಬಾ ಒಳ್ಳೆಯ ಹುಡುಗ. ಆತ ತುಂಬ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಒಳ್ಳೆಯ ಕುಟುಂಬದಿಂದ ಬಂದವನು. ಆತನಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇರಲಿಕ್ಕಿಲ್ಲ ಎಂಬ ವಿಶ್ವಾಸವಿದೆ. ಹಾಗಾಗಿ ಅಕ್ಷತ್ಗೆ ನೈತಿಕ ಸ್ಥೈರ್ಯ ತುಂಬಲು ಭೇಟಿ ನೀಡಿದ್ದೇನೆ ಎಂದು ಹೇಳಿದ್ದಾರೆ.