ಮಂಗಳೂರು: ಸಿಎಎ ಕೋಮು ವಿರೋಧಿ ಕಾಯ್ದೆಯಲ್ಲ. ಈ ಕಾಯ್ದೆಯ ಮೂಲಕ ಭಾರತವನ್ನು ಭಾರತೀಯರನ್ನು ರಕ್ಷಿಸುವ ಉದ್ದೇಶವಿದೆಯೇ ಹೊರತು, ಮುಸ್ಲಿಮರನ್ನು ಭಾರತದಿಂದ ಹೊರಕಳಿಸುವ ಉದ್ದೇಶವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.
ನಗರದ ಉರ್ವ ಕೆನರಾ ಪ್ರೌಢಶಾಲೆಯ ಮಿಜಾರು ಗೋವಿಂದ ಪೈ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಸಿಎಎ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಮಾಧವ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸ್ವಾತಂತ್ರ್ಯ, ಹಕ್ಕು ಇಲ್ಲ. ಆದರೆ ಭಾರತದಲ್ಲಿ ಎಲ್ಲಾ ಅಲ್ಪಸಂಖ್ಯಾತರಿಗೂ ಸ್ವಾತಂತ್ರ್ಯ, ಭದ್ರತೆ ಹಾಗೂ ಹಕ್ಕು ಇದೆ. ಆದ್ದರಿಂದ ಸಿಎಎ ಕಾಯ್ದೆಯ ಪ್ರಕಾರ ಮುಸ್ಲಿಂರನ್ನು ದೇಶದಿಂದ ಹೊರಕಳಿಸಲಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಎಲ್ಲರೂ ಹೊರ ಬರಬೇಕಿದೆ ಎಂದು ಹೇಳಿದರು.
ಸಿಎಎ ವಿರುದ್ಧ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಬಹಳಷ್ಟು ಪ್ರತಿಭಟನಾಕಾರರಿಗೆ ತಾವು ಯಾವುದರ ವಿರುದ್ಧ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅರಿವೇ ಇರುವುದಿಲ್ಲ. ಸುಲಭವಾಗಿ ಜನರ ದಾರಿ ತಪ್ಪಿಸುವ ಕೆಲಸ ನಡೆಸಲಾಗುತ್ತದೆ. ಈ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಎಲ್ಲಾ ಪ್ರತಿಭಟನೆಗಳ ಹಿಂದೆ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕು ಇದೆ. ಆದರೆ, ಇದು ಕೋಮುವಾದಿಯಲ್ಲದ ಕಾಯ್ದೆ ಎಂಬುದು ಸ್ಪಷ್ಟ ಎಂದು ರಾಮ್ ಮಾಧವ್ ಹೇಳಿದರು.