ಮೂಡುಬಿದಿರೆ(ದ.ಕ): 15 ವರ್ಷಗಳ ಕಾಲ ಅನಿವಾಸಿ ಭಾರತೀಯರಾಗಿ ಕೈತುಂಬಾ ಸಂಬಳ ದೊರಕುವ ನೌಕರಿ. ಇನ್ನೊಂದೆಡೆ ಕೃಷಿಯ ಸೆಳೆತ, ಇದ್ದಕ್ಕಿದ್ದಂತೆ ದುಬೈ ನೌಕರಿಗೆ ತಿಲಾಂಜಲಿಯಿರಿಸಿ ತಾಯ್ನಾಡಿಗೆ ಮರಳಿಯೇ ಬಿಟ್ಟರು. ಇದೀಗ ಇವರು ಯಶಸ್ವಿ ಕೃಷಿ ಸಾಧಕ.
ಮೂಡುಬಿದಿರೆ ತಾಲೂಕಿನ ತಾಕೋಡೆ ಎಂಬಲ್ಲಿ ತಮ್ಮ 7.50 ಎಕರೆ ಜಾಗದಲ್ಲಿ ಭತ್ತ, ಅಡಿಕೆ, ತೆಂಗು, ಬಾಳೆ, ವಿವಿಧ ಹಣ್ಣುಗಳು, ತರಕಾರಿಗಳು, ಕರಿಮೆಣಸು, ಗೇರುಬೀಜ ಇತ್ಯಾದಿ ಬೆಳೆಗಳನ್ನು ಬೆಳೆಸುತ್ತಿರುವ ಇವರ ಹೆಸರು ಇಗ್ನೇಷಿಯಸ್ ಲೋಬೊ. ಇವರ ಕೆಲಸಕ್ಕೆ ಸಾಥ್ ನೀಡಲು ಜೊತೆಗೊಬ್ಬ ಸಹಾಯಕ ಕೂಲಿಯಾಳು ಹಾಗೂ ಕುಟುಂಬದವರ ಸಹಕಾರ. ಕೇವಲ ತಮ್ಮ ಶ್ರಮದಿಂದ ಏಳುವರೆ ಎಕರೆ ಜಾಗದಲ್ಲಿ ಬಂಗಾರದ ಬೆಳೆ ಬೆಳೆದಿದ್ದಾರೆ.
ಇವರ ತೋಟ-ಗದ್ದೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನೋಟ ಹಾಯಿಸಿದಷ್ಟು ದೂರಕ್ಕೂ ಗದ್ದೆಯಲ್ಲಿ ಹೊಂಬಣ್ಣದಿಂದ ಕಂಗೊಳಿಸುತ್ತಿರುವ ಭತ್ತದ ಪೈರು. ಗಿಡದ ತುಂಬಾ ಬೆಳೆದು ನಿಂತಿರುವ ಕರಿ ಮೆಣಸು, ವೈವಿಧ್ಯಮಯವಾದ ಹೂವುಗಳು, ಹಣ್ಣು-ತರಕಾರಿಗಳು. ಇವೆಲ್ಲವನ್ನೂ ಆಶ್ರಯಿಸಿ ಬದುಕುತ್ತಿರುವ ಹಕ್ಕಿ, ಚಿಟ್ಟೆಗಳು ಕಣ್ಣಿಗೆ ಮುದ ನೀಡುತ್ತದೆ.
ಸುಮಾರು 15 ವರ್ಷಗಳ ಕಾಲ ದುಬೈನಲ್ಲಿ ಕೈತುಂಬಾ ಸಂಬಳ ಪಡೆಯುವ ಉದ್ಯೋಗದಲ್ಲಿದ್ದ ಇಗ್ನೇಷಿಯಸ್ ಲೋಬೊ ಅವರು ತಂದೆಯ ಸಾವಿನಿಂದಾಗಿ ಮರಳಿ ತಾಯ್ನಾಡಿನಲ್ಲಿ ಬದುಕುವ ಪ್ರೇರೇಪಣೆ ನೀಡಿತು. ಅಲ್ಲಿಂದ ಭಾರತಕ್ಕೆ ಮರಳಿದ ಅವರು, ಮೂಡುಬಿದಿರೆಯಲ್ಲಿನ ತಾಕೋಡೆಯ ತಮ್ಮ ಏಳು ಎಕರೆ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಯೇ ಬಿಟ್ಟರು.
ತಮ್ಮ ಮನೆಯ ಖರ್ಚಿಗೆ ಇರಿಸಿ ಉಳಿದ ಅಕ್ಕಿ, ತೆಂಗಿನಕಾಯಿ, ತರಕಾರಿ, ಹಣ್ಣು-ಹಂಪಲುಗಳು, ಕರಿಮೆಣಸು, ಬಾಳೆ ಎಲ್ಲವನ್ನೂ ಮಾರಾಟ ಮಾಡುತ್ತಾರೆ. ಅಲ್ಲದೆ ಶೇ.25ರಷ್ಟು ಅಕ್ಕಿ, ಹಣ್ಣು ಹಂಪಲು, ತರಕಾರಿಗಳು, ಹೂಗಳು ಇನ್ನಿತರ ಪ್ರಾಣಿ-ಪಕ್ಷಿಗಳ ಪಾಲಾಗುತ್ತವೆ. ಇದರಿಂದ ಇವರ ಮನೆಯ ಸುತ್ತಲೂ ವೈವಿಧ್ಯಮಯ ಪಕ್ಷಿಗಳು, ಚಿಟ್ಟೆಗಳು, ಪ್ರಾಣಿಗಳು ಸುಳಿದಾಡುತ್ತಿರುತ್ತವಂತೆ.
ಇದನ್ನೂ ಓದಿ: ಮಂಗಳೂರಿನ 'ಜ್ಯೋತಿ' ಇನ್ನು ನೆನಪಷ್ಟೇ..
ಕೃಷಿಗೆ ಬೇಕಾದ ನೀರಿಗಾಗಿ ಇವರ ತೋಟದಲ್ಲಿ ಎರಡು ಬೃಹದಾಕಾರದ ತೆರೆದ ಬಾವಿಗಳು, ಎರಡು ಬೋರ್ವೆಲ್ಗಳಿದ್ದು, ಜೊತೆಗೆ ಇಂಗು ಗುಂಡಿಗಳನ್ನು ತೆರೆದಿದ್ದಾರೆ. ಇದರಿಂದ ಸಾಕಷ್ಟು ನೀರು ಬೇಸಿಗೆ ಕಾಲದಲ್ಲೂ ಲಭ್ಯವಿರುತ್ತದೆ. ಸಂಪೂರ್ಣ ಸಾವಯವ ಮಾದರಿಯಲ್ಲಿ ಇವರು ಕೃಷಿ ಮಾಡುತ್ತಿದ್ದು, ಗೊಬ್ಬರಕ್ಕಾಗಿ ಹಟ್ಟಿ ಗೊಬ್ಬರ, ಸುಡು ಮಣ್ಣು ಹಾಗೂ ಕೃಷಿ ಇಲಾಖೆಯಿಂದ ಸಾವಯವ ಗೊಬ್ಬರಗಳನ್ನು ಹಾಕುತ್ತಾರಂತೆ.
ಈ ಬಗ್ಗೆ ಕೃಷಿಕ ಇಗ್ನೇಷಿಯಸ್ ಲೋಬೊ ಮಾತನಾಡಿ, ಕೃಷಿಯಲ್ಲಿ ಏಕಾಏಕಿ ನಮಗೆ ಆದಾಯ ಬರುವುದಿಲ್ಲ. ಆದರೆ, ಬೇರೆ ಬೇರೆ ರೀತಿಯ ಕೃಷಿ ಮಾಡಿ, ಸರಿಯಾಗಿ ಪೋಷಣೆ ಮಾಡಿದ್ದಲ್ಲಿ ಆದಾಯ ಖಂಡಿತ. ಭೂಮಿಗಾಗಿ ನಾನು ವ್ಯಯಿಸಿದ ಶ್ರಮ ಯಾವತ್ತೂ ವ್ಯರ್ಥವಾಗೋದಿಲ್ಲ. ಕೊರೊನಾ ಕಾಲದಲ್ಲಿಯೂ ನಮಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಆದ್ದರಿಂದ ಯುವಕರು ನೌಕರಿ, ಉದ್ಯಮಕ್ಕಿಂತ ಕೃಷಿಯಲ್ಲಿ ತೊಡಗುವುದು ಉತ್ತಮ ಎಂದರು.