ಮಂಗಳೂರು: ಮೂಡುಬಿದಿರೆ ತಾಲೂಕಿನ ಪಡುಕೊಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಬಂದು ಮಲಗಿದ್ದ ಶ್ವಾನವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿದೆ. ಆದರೆ ಕಾಂಪೌಂಡ್ ಹಾರುತ್ತಿರುವಾಗ ಚಿರತೆ ಬಾಯಿಯಿಂದ ನಾಯಿ ತಪ್ಪಿಸಿಕೊಂಡು ಓಡಿದೆ. ಈ ಎಲ್ಲಾ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಡುಕೊಣಾಜೆಯ ಸತೀಶ್ ಎಂಬುವರ ಮನೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಬೇಟೆಗಾಗಿ ಹವಣಿಸುತ್ತಿದ್ದ ಚಿರತೆಯು ಮನೆಯ ಕಾಂಪೌಂಡ್ ಪ್ರವೇಶಿಸಿದೆ. ಈ ಸಂದರ್ಭ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ನೋಡಿದ್ದು, ಮೆಲ್ಲನೆ ಸದ್ದಿಲ್ಲದೆ ಹೆಜ್ಜೆ ಹಾಕಿಕೊಂಡು ಬಂದು ನಾಯಿಯನ್ನು ಹೊತ್ತೊಯ್ದಿದೆ.
ಆದರೆ, ಬೇಟೆಯನ್ನು ಕಚ್ಚಿಕೊಂಡ ಚಿರತೆ ಕಾಂಪೌಂಡ್ ಹಾರುವಾಗ ಕ್ಷಣಾರ್ಧದಲ್ಲೇ ನಾಯಿ ತಪ್ಪಿಸಿಕೊಂಡಿದೆ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಇದರಿಂದ ಭೀತರಾಗಿರುವ ಮನೆ ಮಂದಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜೊತೆ ಮಾತುಕತೆ ನಡೆಸಿದ್ದು ಚಿರತೆ ಸೆರೆ ಹಿಡಿಯಲು ಬೋನು ಇಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:ಎರಡು ಗುಂಪುಗಳ ಮಧ್ಯೆ ಮಾರಾಮಾರಿ.. ಕಲ್ಲು ತೂರಾಟ: ಕಾರಿನ ಗಾಜು ಪೀಸ್ ಪೀಸ್!