ಪುತ್ತೂರು (ದಕ್ಷಿಣ ಕನ್ನಡ): ಕುಟುಂಬಸ್ಥರ ನಡುವಿನ ಆಸ್ತಿ ವಿವಾದ ಸಂಬಂಧ ಪತಿ-ಪತ್ನಿಯ ನಡುವಿನ ವಿವಾದದಲ್ಲಿ ಪತಿ ಮನೆಯವರನ್ನು ಪೊಲೀಸರ ಸಮ್ಮುಖದಲ್ಲೇ ರೈತ ಮುಖಂಡನೋರ್ವ ಮನೆಯಿಂದ ಹೊರಹಾಕಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ರೈತ ಮುಖಂಡ ಎಂದು ಸಮಸ್ಯೆ ಬಗೆಹರಿಸಲು ಬಂದಿದ್ದ ವಿಕ್ಟರ್ ಮಾರ್ಟಿನ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು..?
ಜಬತ್ತೂರು ಗ್ರಾಮದ ಪರಂದಾಜೆಯ ನಿವಾಸಿ ಕೆ.ಜೆ.ಜೋನ್ಸ್ ಹಾಗೂ ಆತನ ಪತ್ನಿ ಚಿನ್ನಮ್ಮನ ನಡುವೆ ಆಸ್ತಿ ವಿವಾದವಿತ್ತು. ಪತ್ನಿ ಚಿನ್ನಮ್ಮ ತನ್ನ ಪತಿಯ ಹೆಸರದಲ್ಲಿದ್ದ ಜಮೀನನ್ನು ಅಕ್ರಮ-ಸಕ್ರಮದ ಮೂಲಕ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾಳೆ ಎಂಬ ಆರೋಪವಿತ್ತು. ಈ ಸಂಬಂಧ ಗಲಾಟೆ ನಡೆದಿತ್ತು. ಈಗ ಒಂದೆಡೆ ವಾಸಿಸುತ್ತಿದ್ದ ತಂದೆ ಹಾಗೂ ಮಗಳನ್ನು ಮನೆಯಿಂದ ಹೊರಹಾಕಲು ಪತ್ನಿ ಕಡೆಯಿಂದ ಹಸಿರು ಸೇನೆ ಮುಖಂಡ ಎಂದು ಹೇಳಿಕೊಂಡ ವಿಕ್ಟರ್ ಆಗಮಿಸಿ ಮನೆಯವರನ್ನು ಹೊರಹಾಕಿದ್ದಾನೆ ಎನ್ನಲಾಗಿದೆ.
ಮನೆ ಖಾಲಿ ಮಾಡುವಂತೆ ಯಾವುದೇ ಆದೇಶ ಇಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಮನೆಯಲ್ಲಿದ್ದ ಕುಟುಂಬಸ್ಥರನ್ನು ಹೊರಹಾಕಲಾಗಿದೆ. ಅಲ್ಲದೆ ಮನೆಗೆ ಹಾಕಲಾಗಿದ್ದ ಬೀಗವನ್ನು ಪೊಲೀಸರ ಸಮ್ಮುಖದಲ್ಲೇ ಒಡೆಯಲು ಯತ್ನಿಸುತ್ತಿರುವುದು ಮೊಬೈಲ್ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗುತ್ತಿದೆ.
ಗಲಾಟೆಯ ವೇಳೆ ವಿಕ್ಟರ್, ಜೋನ್ಸ್ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಜೋನ್ಸ್ ಮನೆಗೆ ಬೀಗ ಹಾಕಿ ತೆರಳಿದ್ದು, ಮನೆ ಮಂದಿಯಲ್ಲಾ ಬೀದಿಗೆ ಬಿದ್ದಂತಾಗಿದೆ.
ಇದನ್ನೂ ಓದಿ: ಶಿಕ್ಷಣ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಗಿದೆ ಪ್ರಕ್ರಿಯೆ?