ಮಂಗಳೂರು: 75ನೇ ಜನ್ಮದಿನಾಚರಣೆಯ ಹಿನ್ನೆಲೆ ಸ್ಯಾಂಡಲ್ವುಡ್ ಖ್ಯಾತ ನಟ ಅನಂತನಾಗ್ ಅವರು ಮಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಗರದ ರಥಬೀದಿ ಶ್ರೀವೆಂಕಟರಮಣ ದೇವಸ್ಥಾನ, ಶ್ರೀ ಉಮಾಮಹೇಶ್ವರ ದೇವಸ್ಥಾನ, ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕಟೀಲು ದೇವಸ್ಥಾನದಲ್ಲಿ ಪ್ರಸಾದ ಭೋಜನವನ್ನು ಕುಟುಂಬದೊಂದಿಗೆ ಸವಿದರು. ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಅವರು ತಮ್ಮ ಅನಿಸಿಕೆಯನ್ನು ಲಿಖಿತವಾಗಿ ಪುಸ್ತಕದಲ್ಲಿ ದಾಖಲು ಮಾಡಿದರು. ಅನಂತನಾಗ್ ಅವರೊಂದಿಗೆ ಪತ್ನಿ ಗಾಯತ್ರಿ ನಾಗ್, ಪುತ್ರಿ ಅದಿತಿ, ಅಳಿಯ ವಿವೇಕ್, ಆತ್ಮೀಯರಾದ ಮಂಗಲ್ಪಾಡಿ ನರೇಶ್ ಶೆಣೈ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗಿರಿಧರ್ ಶೆಟ್ಟಿ, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು, ಅರ್ಚಕ ವೃಂದ ಮತ್ತಿತರು ಉಪಸ್ಥಿತರಿದ್ದರು.
![actor ananthnag](https://etvbharatimages.akamaized.net/etvbharat/prod-images/04-09-2023/19430096_thuyyy-2.jpg)
ದಿವ್ಯಾಂಗ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿದ ಅನಂತನಾಗ್ : ನಗರದ ಅನಿರ್ವೇದ ಫೌಂಡೇಶನ್ಗೆ ಭೇಟಿ ನೀಡಿದ ಅನಂತನಾಗ್ ಅವರು ದಿವ್ಯಾಂಗ ಮಕ್ಕಳ ಜೊತೆಗೆ ಹುಟ್ಟುಹಬ್ಬ ಆಚರಿಸಿದರು. 75 ನೇ ಹುಟ್ಟುಹಬ್ಬದ ಸಂಭ್ರಮವನ್ನು ವಿಶೇಷ ಚೇತನ ಮಕ್ಕಳ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ನಾಗ್, ದಿವ್ಯಾಂಗ ಮಕ್ಕಳನ್ನು ಬಹಳ ಪ್ರೀತಿಯಿಂದ ಸಲಹಿ, ಅವರ ಸರ್ವತ್ತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಅನಿರ್ವೇದ ಫೌಂಡೇಶನ್ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹೇಳಿದರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅನಂತನಾಗ್, ಮಕ್ಕಳಲ್ಲಿ ದೇವರನ್ನು ಕಾಣಬೇಕು ಎಂಬ ಉದಾತ್ತ ಚಿಂತನೆಯನ್ನು ಆನಂದಾಶ್ರಮದಲ್ಲಿ ತಮ್ಮ ಗುರುಗಳು ಹೇಳಿಕೊಟ್ಟಿದ್ದರು. ಇಂತಹ ದಿವ್ಯಾಂಗ ಮಕ್ಕಳಿಗೆ ದಾರಿದೀಪವಾಗಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ. ಶ್ವೇತಾ ಅವರು ಮಕ್ಕಳ ಬಾಳಿನಲ್ಲಿ ದೇವರಂತೆ ಬಂದಿದ್ದೀರಿ. ನಿಮ್ಮ ಸೇವೆ ಇನ್ನಷ್ಟು ದಿವ್ಯ ಚೇತನ ಮಕ್ಕಳ ಬಾಳಿಗೆ ಬೆಳಕಾಗಲಿ. ಈ ಸಂಸ್ಥೆಯ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
![actor ananthnag](https://etvbharatimages.akamaized.net/etvbharat/prod-images/04-09-2023/19430096_thuyyy-1.jpg)
ಇದನ್ನೂ ಮುನ್ನ, ಅನಂತ್ ನಾಗ್ ಅವರ 75ನೇ ಜನ್ಮದಿನ ಹಾಗೂ ವೃತ್ತಿಜೀವನದ 50ರ ಸಂಭ್ರಮಾಚರಣೆ ಸಲುವಾಗಿ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ 'ಅನಂತ ಅಭಿನಂದನೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಯನ್ನು ಮಲ್ಲಿಗೆ, ಜಾಜಿ ಹೂವಿನ ಮಾಲೆ, ಬೆಳ್ಳಿಯ ವೀಳ್ಯದ ಎಲೆ, ತುಳುನಾಡಿನ ಪರಂಪರೆಯ ಕಂಬಳದ ಬೆತ್ತ, ಪುಷ್ಪವೃಷ್ಟಿ ಸಹಿತ ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅನಂತ್ ನಾಗ್ ದಂಪತಿಯನ್ನು ಡೊಂಗರಕೇರಿ ಕೆನರಾ ಹೈಸ್ಕೂಲ್ನಿಂದ ಟಿ ವಿ ರಮಣ ಪೈ ಸಭಾಂಗಣದವರೆಗೆ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಕಾಸರಗೋಡು ಚಿನ್ನಾ, ಸದಾಶಿವ ಶೆಣೈ, ದಿನೇಶ್ ಮಂಗಳೂರು, ಲಕ್ಷ್ಮಣ ಕುಮಾರ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : 75ನೇ ಜನ್ಮದಿನದ ಸಂಭ್ರಮದಲ್ಲಿ ನಟ ಅನಂತ್ ನಾಗ್: ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ 'ಅನಂತ ಅಭಿನಂದನೆ'