ಮಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದ್ದು, ತಣ್ಣೀರು ಬಾವಿ ಬೀಚ್ ಅಭಿವೃದ್ಧಿಗೆ 7 ಕೋಟಿ ಬಿಡುಗಡೆಗೊಳಿಸಿದೆ. ಇದರೊಟ್ಟಿಗೆ ವಿವಿಧ ಕಾಮಗಾರಿ, ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಭರವಸೆ ನೀಡಿದರು.
ಇಲ್ಲಿನ ಪಣಂಬೂರು ಕಡಲ ಕಿನಾರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಮನೋಹರ ಪ್ರಸಾದ್ ಅವರಿಗೆ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಕಡಲ ಕಿನಾರೆ ಉತ್ತಮ ಪರಿಸರ. ಆದರೆ, ಪಣಂಬೂರು ಬೀಚ್ನಲ್ಲಿ ಸ್ಥಳಾವಕಾಶ ಕೊರತೆ ಇದೆ. ಆದ್ದರಿಂದ ಪಣಂಬೂರು ಕಡಲ ಕಿನಾರೆಯನ್ನು ಎನ್ಎಂಪಿಟಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ತುಂಬಾ ವರ್ಷಗಳವರೆಗೆ ಗುತ್ತಿಗೆಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಕಳೆದ ಬಾರಿಯಂತೆ ಬಂಗ್ರ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ 'ರಿವರ್ ಫೆಸ್ಟಿವಲ್' ಅನ್ನು ಪ್ರವಾಸೋದ್ಯಮ ಇಲಾಖೆ ಆಚರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆದ್ದರಿಂದ 18 ಎಕರೆ ರೆವಿನ್ಯೂ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡುವ ಕೆಲಸ ನಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ 1 ಕೋಟಿ ನದಿ ತೀರದ ರಸ್ತೆ ಅಭಿವೃದ್ಧಿಗೆ ಬಿಡುಗಡೆಗೊಳಿಸಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಉಪ ಜಿಲ್ಲಾಧಿಕಾರಿ ರೂಪಾ, ಮಂಗಳೂರು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು.