ಮಂಗಳೂರು: ರಾಜ್ಯದಲ್ಲಿ ಹಿಂದೆಂದೂ ಸಂಭವಿಸದಂತಹ ನೆರೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 25 ಕೋಟಿ ಮಂಜೂರು ಮಾಡಲಾಗುತ್ತಿದೆ. ಇದನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ನೆರೆ ಬಂದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಸಮೀಕ್ಷೆಯಂತೆ ರಾಜ್ಯದಾದ್ಯಂತ ಸುಮಾರು 20 ಸಾವಿರ ಮನೆಗಳು, 28 ಸಾವಿರ ಕುಟುಂಬಗಳ ಕೃಷಿ ಭೂಮಿ ನೀರು ಪಾಲಾಗಿವೆ. ಇದೊಂದು ಭೀಕರ ದುರಂತ ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆ ಬೆಳ್ತಂಗಡಿ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಅಭ್ಯಸಿಸುತ್ತಿರುವ ನೆರೆ ಹಾವಳಿ ಬಾಧಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಘೋಷಿಸಿದೆ. ಈವರೆಗೆ ಸುಮಾರು 19 ಸಾವಿರ ಬೆಡ್‍ಶೀಟ್‍ಗಳನ್ನು ಹಂಚಲಾಗಿದೆ. ಮುಳುಗಡೆಯಾದ ಮನೆಗಳನ್ನು ಸ್ವಚ್ಛಗೊಳಿಸಲು ಸುಮಾರು 2 ಟನ್‍ನಷ್ಟು ಬ್ಲೀಚಿಂಗ್ ಪೌಡರ್ ನೀಡಿದೆ. ಸುಮಾರು 4 ಸಾವಿರ ಕುಟುಂಬಗಳಿಗೆ ತಲಾ ₹ 1 ಸಾವಿರ ಮೌಲ್ಯದ ತುರ್ತು ಗೃಹ ಉಪಯೋಗಿ ವಸ್ತುಗಳನ್ನು ಒದಗಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಯ ವತಿಯಿಂದ ₹ 50 ಲಕ್ಷ ಮೊತ್ತವನ್ನು ‘ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್‍ಫಂಡ್‍ಗೆ’ ವರ್ಗಾಯಿಸಲಾಗುವುದು ಎಂದರು.
ವಿಪತ್ತು ನಿರ್ವಹಣಾ ವೇದಿಕೆ ಸ್ಥಾಪನೆ : ನೆರೆ ಹಾವಳಿ, ಭೂಕುಸಿತ, ಬಿರುಗಾಳಿ ಮುಂತಾದ ಪ್ರಕೃತಿ ವಿಕೋಪಗಳು ಪುನರಾವರ್ತಿಸುತ್ತಿರುವ ಹಿನ್ನಲೆಯಲ್ಲಿ ತುರ್ತು ರಕ್ಷಣೆಗೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಗಳ ಪೈಕಿ ಜನ ಜಾಗೃತಿ ವೇದಿಕೆ, ಪ್ರಗತಿಬಂಧು ಒಕ್ಕೂಟಗಳು, ಜ್ಞಾನವಿಕಾಸ ಕೇಂದ್ರಗಳು, ಸ್ವಸಹಾಯ ಸಂಘಗಳು ಜಂಟಿ ಗುಂಪುಗಳು, ಸಕ್ರಿಯವಾಗಿವೆ. ಆಯ್ದ ಸದಸ್ಯರ ತಂಡವೊಂದನ್ನು ಪ್ರತಿ ತಾಲೂಕು ಮಟ್ಟದಲ್ಲಿ ರಚಿಸಲಾಗುವುದು.
ಪಶ್ಚಿಮ ಘಟ್ಟ ಅಧ್ಯಯನ ಪೀಠ ಸ್ಥಾಪನೆ: ಜೀವ ವೈವಿಧ್ಯಗಳಿಂದ ಕೂಡಿರುವ ಪಶ್ಚಿಮ ಘಟ್ಟ ಶ್ರೇಣಿಯು ಹಲವಾರು ಕಾರಣಗಳಿಂದ ಸೂಕ್ಷ್ಮ ಸನ್ನಿವೇಶ ನಿರ್ಮಾಣವಾಗಿದೆ. ಘಟ್ಟ ಪ್ರದೇಶದಲ್ಲಿ ಸುಮಾರು 500ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಕೃತಿಕ ಸಮತೋಲನವನ್ನು ಪಶ್ಚಿಮ ಘಟ್ಟದಲ್ಲಿ ಕಾಪಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ, ಧರ್ಮಸ್ಥಳದ ವತಿಯಿಂದ ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಯಲ್ಲಿ ₹ 2 ಕೋಟಿ ನೆರವಿನೊಂದಿಗೆ ಪಶ್ಚಿಮ ಘಟ್ಟ ಅಧ್ಯಯನ ಪೀಠ’ವನ್ನು ಸ್ಥಾಪಿಸಲಾಗುವುದು ಎಂದರು. ಶಾಸಕ ಹರೀಶ್ ಪೂಂಜಾ ಇದ್ದರು.
ಕೇಂದ್ರ ಸರ್ಕಾರಕ್ಕೆ ಮನವಿ: ಕೂಡಲೇ ರಾಜ್ಯದಲ್ಲಿನ ನೆರೆ ಹಾವಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಮಟ್ಟದಲ್ಲಿ ಅನುದಾನ ಬಿಡುಗಡೆಗೊಳಸಬೇಕು ಎಂದು ಮನವಿ ಮಾಡಿಕೊಂಡರು.