ಸುರತ್ಕಲ್: ಜಿಲ್ಲಾಡಳಿತದ ಆದೇಶದಂತೆ ದ.ಕ ಜಿಲ್ಲೆಯಲ್ಲಿ ವಾಸವಿರುವ ವಲಸೆ ಕಾರ್ಮಿಕರು ಮರಳಿ ಊರಿಗೆ ತೆರಳಲು ಅವಕಾಶ ನೀಡಿದ್ದು, ಸುರತ್ಕಲ್ ಭಾಗದಲ್ಲಿ ಸುಮಾರು ಎರಡು ಸಾವಿರ ವಲಸೆ ಕಾರ್ಮಿಕರು ಮರಳಿ ತಮ್ಮ ಊರಿಗೆ ತೆರಳಿದ್ದಾರೆ.
ಬಾದಾಮಿ, ಬಾಗಲಕೋಟೆ, ಕೊಪ್ಪಳ, ಕುಷ್ಟಗಿಗೆ ಸುಮಾರು 30 ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ.ಭರತ್ ಶೆಟ್ಟಿ, ಸರ್ಕಾರದ ಆದೇಶದಂತೆ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಬಸ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೇ ವೈದ್ಯರ ತಪಾಸಣೆಯ ನಂತರವೇ ಅವರ ಹೆಸರ ನೋಂದಾಯಿಸಿ ಪಾಸ್ ಮೂಲಕ ಅವರನ್ನು ಊರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗ ಉ೦ಟಾಗದಂತೆ ಪೊಲೀಸ್ ಇಲಾಖೆ, ವೈದ್ಯಕೀಯ ಸಿಬ್ಬಂದಿ ತಮ್ಮ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮನಪಾ ಕಮಿಷನರ್ ಶಾನಾಡಿ ಅಜಿತ್ ಹೆಗ್ಡೆ, ಪೊಲೀಸ್ ಕಮಿಷನರ್ ಬೆಳ್ಳಿಯಪ್ಪ, ಉಪ ಮೇಯರ್ ವೇದಾವತಿ, ಸ್ಥಳೀಯ ಮನಪಾ ಸದಸ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಎಲ್ಲಾ ಪ್ರಯಾಣಿಕರು, ಬಸ್ ಚಾಲಕರು, ವೈದ್ಯಕೀಯ ಸಿಬ್ಬಂದಿಗೆ ಉಚಿತ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸುರತ್ಕಲ್ ಆಪತ್ಬಾಂಧವ ಸಮಾಜ ಸೇವಾ ಸಂಘದ ವತಿಯಿಂದ ಮಾಡಲಾಗಿತ್ತು.