ಬಂಟ್ವಾಳ : ತಾಲೂಕಿನ ವೀರಕಂಭ ರಕ್ಷಿತಾರಣ್ಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಹಾಗೂ ಸಂರಕ್ಷಿತ ಪ್ರಾಣಿಯಾದ ಉಡವನ್ನು ಸಾಕಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬಂಟ್ವಾಳ ವಲಯಾರಣ್ಯಾಧಿಕಾರಿಗಳು ಗುರುವಾರ ರಾತ್ರಿ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತಿಬ್ಬರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಮೊಯ್ದೀನ್ (55) ಮತ್ತು ಕೇರಳ ವರ್ಕಾಡಿಯ ಇಬ್ರಾಹಿಂ (48) ಬಂಧಿತ ಆರೋಪಿಗಳು. ಕೇರಳ ವರ್ಕಾಡಿಯ ಸಿದ್ಧೀಕ್ ಮತ್ತು ಕೊರುಂಗು ಸಿದ್ಧೀಕ್ ಎಂಬಿಬ್ಬರು ತಲೆಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆಯುತ್ತಿದೆ ಎಂದು ಬಂಟ್ವಾಳ ವಲಯಾರಣ್ಯಾಧಿಕಾರಿ ರಾಜೇಶ್ಿ ಬಳಿಗಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಂಧಿತರಿಂದ ಅಂದಾಜು 3 ಲಕ್ಷ ರೂ. ಮೌಲ್ಯದ ಗಂಧದ ಮರದ ತುಂಡುಗಳು, ಆಯುಧ ಮತ್ತು ಸತ್ತ ಉಡವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮೊಯ್ದೀನ್ ಮನೆಯಲ್ಲಿ ಇಂತಹ ಕೃತ್ಯ ನಡೆಸಲೆಂದೇ ಮೊದಲೇ ತಯಾರಿ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮೈಸೂರು : ಕೆರೆಯಲ್ಲಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ!
ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಯಶೋಧರ್, ಪ್ರೀತಂ ಎಸ್, ಬಸಪ್ಪ ಹಲಗೇರ, ಅರಣ್ಯ ರಕ್ಷಕರಾದ ಜಿತೇಶ್ ಪಿ, ಶೋಭಿತ್, ದಯಾನಂದ ಎನ್, ರವಿ, ರೇಖಾ, ಅರಣ್ಯ ವೀಕ್ಷಕರಾದ ಪ್ರವೀಣ್, ಚಾಲಕ ಜಯರಾಂ ಭಾಗವಹಿಸಿದ್ದರು.