ಮಂಗಳೂರು: ಕೊರೊನಾ ಸೋಂಕಿನಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿರುವ ಬಂಟ್ವಾಳದ ಕಸಬಾದ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ.
67 ವರ್ಷದ ಈ ಮಹಿಳೆ ಕೋವಿಡ್-19 ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಅತ್ತೆ-ಸೊಸೆಯ ನೆರೆಮನೆಯವರಾಗಿದ್ದರು. ಇವರಿಗೆ ಏಪ್ರಿಲ್ 21ರಂದು ಕೋವಿಡ್ ಸೋಂಕು ತಗುಲಿದೆ ಎಂದು ವರದಿ ಬಂದಿತ್ತು. ಆ ಬಳಿಕ ಇವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ವೈರಸ್ ಶಂಕೆಯಿಂದ ಇಂದು ಮಂಗಳೂರಿನಲ್ಲಿ 143 ಮಂದಿಯ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಹಿಂದೆ ಪರೀಕ್ಷೆಗೆಂದು ಕಳುಹಿಸಿರುವ 214 ಮಂದಿಯ ಗಂಟಲು ದ್ರವ ಮಾದಿಗಳ ವರದಿ ಬಂದಿದ್ದು, ಅದರಲ್ಲಿ 213 ಮಂದಿಯ ವರದಿ ನೆಗೆಟಿವ್ ಬಂದಿವೆ. ಇನ್ನು ಓರ್ವ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಮತ್ತೋರ್ವ ಮಹಿಳೆ ಮೃತಪಟ್ಟಿದ್ದಾರೆ.
29 ಮಂದಿ ನಿಗಾದಲ್ಲಿದ್ದು, 32 ಮಂದಿಯನ್ನು ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಹಾಗೂ 53 ಮಂದಿಯನ್ನು ಸುರತ್ಕಲ್ನ ಎನ್ಐಟಿಕೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಒಟ್ಟಾರೆಯಾಗಿ 6,073 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ.
ಇಂದು 27 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಮಂಗಳೂರಲ್ಲಿ ಈವರೆಗೆ 39,491ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಈವರೆಗೆ 2,173 ಮಂದಿಯ ಗಂಟಲು ದ್ರವ ಪಡೆಯಲಾಗಿದ್ದು, 1,660 ಮಂದಿಯ ವರದಿ ಬಂದಿದೆ. ಅದರಲ್ಲಿ 1,641 ಮಂದಿಯ ನೆಗೆಟಿವ್ ವರದಿ ಬಂದಿದೆ. 19 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, 12 ಮಂದಿ ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 5 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.