ಮಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಂಬ್ಲಮೊಗರು ಬೆಳ್ಮ ರೆಂಜಾಡಿ ನಿವಾಸಿ ಮುಹಮ್ಮದ್ ಅಶ್ರಫ್ ಎಂಬಾತನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೊಕ್ಸೋ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿ ಮುಹಮ್ಮದ್ ಅಶ್ರಫ್ 2016ರ ಜು.13ರಂದು ಮಧ್ಯಾಹ್ನ ಗುಜರಿ ಹೆಕ್ಕುವ ನೆಪದಲ್ಲಿ ಬಾಲಕನ ಮನೆಯ ಕಂಪೌಂಡನ್ನು ಅಕ್ರಮವಾಗಿ ಪ್ರವೇಶಿಸಿದ್ದಾನೆ. ಈ ಸಂದರ್ಭ ಬಾಲಕ ಹಾಗೂ ಆತನ ಅಜ್ಜಿ ಮಾತ್ರ ಮನೆಯಲ್ಲಿದ್ದರು. ಯಾವುದೋ ನೆಪವೊಡ್ಡಿ ಬಾಲಕನನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಉಳ್ಳಾಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಮತ್ತು ಸಬ್ ಇನ್‌ಸ್ಪೆಕ್ಟರ್ ಶಿವ ಪ್ರಕಾಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಒಟ್ಟು 10 ಜನ ಸಾಕ್ಷಿದಾರರು ಹಾಗೂ 10 ದಾಖಲಾತಿಗಳನ್ನು ಪರಿಗಣಿಸಿ, ಆರೋಪ ಸಾಬೀತಾಗಿರುವುದಾಗಿ ಘೋಷಿಸಿ ಅಕ್ರಮ ಪ್ರವೇಶ ಮತ್ತು ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದಡಿ ಐಪಿಸಿ ಸೆ.377 ಮತ್ತು ಪೊಕ್ಸೊ ಕಾಯ್ದೆಯ ಕಲಂ 6ರ ಅನ್ವಯ ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ದಂಡದ ಮೊತ್ತದಲ್ಲಿ 3,000 ರೂ. ನೊಂದ ಬಾಲಕನಿಗೆ ಪರಿಹಾರವಾಗಿ ಹಾಗೂ ಉಳಿದ 2,000 ರೂ. ಸರ್ಕಾರಕ್ಕೆ ಪಾವತಿಸಬೇಕೆಂದು ತೀರ್ಪಿನಲ್ಲಿ ವಿವರಿಸಲಾಗಿದೆ. ಮಾತ್ರವಲ್ಲದೆ, ಬಾಲಕನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸರ್ಕಾರದಿಂದ ಸೂಕ್ತ ಪರಿಹಾರವನ್ನು ದೊರಕಿಸಿ ಕೊಡಬೇಕೆಂದು ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.