ಚಿತ್ರದುರ್ಗ: ನಗರದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ್ದಾರೆ. ಸಿದ್ದರಾಮಯ್ಯ, ಸುಳ್ಳು ಅಂದ್ರೆ ಬಿಜೆಪಿ ಮನೆದೇವರು ಎನ್ನುವ ಹೇಳಿಕೆಗೆ ಚಿತ್ರದುರ್ಗದಲ್ಲಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ಕೆಲಸ ಮಾಡಿದೆ ಅಂತ ನೋಡಿಕೊಂಡು ನಮ್ಮ ಮೇಲೆ ಆಪಾದನೆ ಮಾಡಲಿ. ಸಿದ್ದರಾಮಯ್ಯ ಏನು ಸತ್ಯ ಹರಿಶ್ಚಂದ್ರನಾ? ಅವರು ಸತ್ಯಹರಿಶ್ಚಂದ್ರ ಆಗಿದ್ರೆ ಅವರ ಮಾತು ಕೇಳಬಹುದಿತ್ತು. ಅವರ ಹಿನ್ನೆಲೆ ನಮಗೆ ಗೊತ್ತಿದೆ. ಎಲ್ಲೋದ್ರು, ಎಲ್ಲಿ ಬಂದ್ರು ಅನ್ನೋದನ್ನು ನಾವು ನೋಡಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅವರೇ ಸಿಎಂ ಆಗಿದ್ದಾಗ 70 ಸ್ಥಾನ ಬಂತು. ನಂತರ ಸಮ್ಮಿಶ್ರ ಸರ್ಕಾರ ಮಾಡಿ ಅವ್ರೇ ಬೀಳಿಸಿದ್ರು. ಡಿಕೆಶಿ ಬಂದಿದ್ದಕ್ಕೆ ಮಾತ್ರ ಈ ರೀತಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಏನೇ ಮಾಡಿದ್ರೂ ವಿರೋಧ ಪಕ್ಷದ ನಾಯಕರಾಗಿಯೇ ಮುಂದುವರಿಯುತ್ತಾರೆ ವಿನಾ ಆಡಳಿತ ಪಕ್ಷದ ನಾಯಕರಾಗಲು ಸಾಧ್ಯವಿಲ್ಲ ಎಂದು ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ನವರು ಭ್ರಷ್ಟಾಚಾರ ಮಾಡಿ ದೇಶವನ್ನೇ ದಿವಾಳಿ ಮಾಡಿದ್ದಾರೆ. ಇಂದು ವಿಶ್ವವೇ ಪ್ರಧಾನಿ ಮೋದಿಯನ್ನು ಹಾಡಿ ಹೊಗಳುತ್ತಿರುವ ವೇಳೆ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿದೆ. ಸತ್ಯ ಮತ್ತು ಧರ್ಮವನ್ನು ನಮ್ಮ ಪಕ್ಷ ಕಾಪಾಡುತ್ತಿದೆ ಎಂದಿದ್ದಾರೆ.