ಚಿತ್ರದುರ್ಗ: ಸಿದ್ದರಾಮಯ್ಯ ಉತ್ಸವದ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಂದು ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದರು. ಪೊಲೀಸ್ ಬಿಗಿ ಭದ್ರತೆ ಮತ್ತು ಸ್ಥಳೀಯ ಕೈ ನಾಯಕರೊಂದಿಗೆ ಇಲ್ಲಿನ ಮುರುಘಾ ಮಠದ ಭೇಟಿ ನೀಡಿದ ರಾಹುಲ್ ಗಾಂಧಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ರಾಹುಲ್ ಗಾಂಧಿ ಭೇಟಿ ಹಿನ್ನೆಲೆ ಮುರುಘಾ ಮಠದ ಎರಡು ದ್ವಾರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಪ್ರತಿ ವಾಹನಗಳ ತಪಾಸಣೆ ನಡೆಸಿಯೇ ಒಳಗೆ ಬಿಡಲಾಗುತ್ತಿತ್ತು. ಇನ್ನು ಪಾಸ್ ನೀಡದ ಹಿನ್ನೆಲೆಯಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಗರಂ ಆದ ಘಟನೆಯೂ ನಡೆಯಿತು. ರಾಹುಲ್ ಗಾಂಧಿಯವರಿಗೆ ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಸೇರಿದಂತೆ ಹಲವರು ಸಾಥ್ ನೀಡಿದರು.
ಸವಣೂರು ಮಠದಿಂದ ಚನ್ನಬಸವ ಸ್ವಾಮೀಜಿ, ಅಥಣಿ ಮಠದ ಶಿವಬಸವ ಸ್ವಾಮೀಜಿಗಳು ರಾಹುಲ್ ಗಾಂಧಿ ಅವರಿಗೆ ಹಾರ ಮತ್ತು ಶಾಲು ಹಾಕಿ ಸ್ವಾಗತ ಕೋರಿದರು. ಇನ್ನು ಮಠಕ್ಕೆ ಆಗಮಿಸುತ್ತಿದ್ದಂತೆ ನೇರವಾಗಿ ಕರ್ತೃ ಗದ್ದುಗೆ ದರ್ಶನ ಪಡೆದ ರಾಹುಲ್ ಬಳಿಕ ಮುರುಘಾ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು. ಮಠಾಧೀಶರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ ರಾಹುಲ್ ಗಾಂಧಿ ಬಳಿಕ ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಓದಿ : ಚಿತ್ರದುರ್ಗಕ್ಕೆ ತೆರಳಿದ ರಾಹುಲ್ ಗಾಂಧಿ: ಸಿದ್ದರಾಮೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ