ಚಿತ್ರದುರ್ಗ: ಪೊಲೀಸ್ ಇಲಾಖೆ ವತಿಯಿಂದ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಗರದ ಸಿ.ಕೆ. ಪುರ, ಕೆಳಗೋಟೆ, ಹಾಗೂ ಅಂಬೇಡ್ಕರ್ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಜನರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ನಂತರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ. ರಾಧಿಕಾ ಮಾತನಾಡಿ ಕೊರೊನಾ ಬಗ್ಗೆ ಪ್ರತಿಯೊಬ್ಬರು ನಿರಂತರವಾಗಿ ಎಚ್ಚೆತ್ತುಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದುವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದೀರಿ ಮುಂದೆಯೂ ಸಹಕಾರ ನೀಡಬೇಕು. ಹೊರ ದೇಶಗಳಲ್ಲಿ ನಿರಂತರ ಸಾವು ಸಂಭವಿಸುತ್ತಿದ್ದು ಹೆಚ್ಚು ಜನಸಂಖ್ಯೆ ಇರುವ ನಾವೆಲ್ಲಾ ಇನ್ನೂ ಜಾಗೃತರಾಗಿರಬೇಕು.
ಲಾಕ್ಡೌನ್ ಸಡಿಲವಾದರೂ ಮೊದಲಿಗಿಂತ ಇನ್ನೂ ಎಚ್ಚರವಾಗಿರಬೇಕು. ಅನಗತ್ಯವಾಗಿ ಹೊರಗೆ ಓಡಾಡಿದರೆ ಕ್ರಮ ಕೈಗೊಳ್ಳಲಾಗುವುದು. ಕೆಲವು ಸೇವೆಗಳಿಗೆ ವಿನಾಯಿತಿ ನೀಡಿದ್ದರೂ ಕೂಡಾ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು. ಅನಗತ್ಯ ಸಂಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ. ಗುಟ್ಕಾ, ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ. ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಗಳು ನಿರಂತರವಾಗಿ ಕಾರ್ಯ ನಿರ್ವಹಿಸುತಿದ್ದು ಅವರ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.