ಚಿತ್ರದುರ್ಗ: ದೇಶಕ್ಕೆ ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಅದು ಮೇಲ್ನೋಟಕ್ಕೆ ಕಾಣಿಸುತ್ತದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದಷ್ಟು ಅವಮಾನ ಬೇರೆ ಯಾವ ಪಕ್ಷವೂ ಮಾಡಿಲ್ಲ. ಅಷ್ಟೇ ಯಾಕೆ ಅಂಬೇಡ್ಕರ್ ಸಮಾಧಿಗೆ ಜಾಗ ಕೊಡದ ಕಾಂಗ್ರೆಸ್ ಸರ್ಕಾರ, ದಲಿತರ ಬಗ್ಗೆ ಮಾತಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.
ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಘಟಕ ಉದ್ಘಾಟಿಸಿ ಮಾತಾಡಿದ ಅವರು, ಬಿಜೆಪಿಗೆ ತಾಕತ್ ಇದ್ದರೆ, ದಲಿತ ಸಿಎಂ ಘೋಷಣೆ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದ್ರೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪರಮೇಶ್ವರ್ಗೆ ಯಾವ ಸ್ಥಾನಮಾನ ನೀಡಿದ್ದರು. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಪರಮೇಶ್ವರ್ ಡಿಸಿಎಂ ಆಗಿದ್ದು. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಯಾರು ಅಡ್ಡಿ ಬರಬಾರದು ಎಂಬ ಉದ್ದೇಶದಿಂದಲೇ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆಯನ್ನ ಸೋಲಿಸಿದ್ರು.
ಪರಮೇಶ್ವರ್, ಬಿ.ಎನ್.ಚಂದ್ರಪ್ಪ ಸೇರಿದಂತೆ ದಲಿತ ರಾಜಕಾರಣಿಗಳು ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯ ಕಾರಣ. ಅಂತಹ ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮಾತಾಡ್ತಿರೋದು ಹಾಸ್ಯಾಸ್ಪದವಾಗಿದೆ ಎಂದರು.
ಬಿಜೆಪಿ ಒಬ್ಬ ಮುಸ್ಲಿಂ ವ್ಯಕ್ತಿಗೆ ಈ ದೇಶದ ರಾಷ್ಟ್ರಪತಿ ಸ್ಥಾನ ನೀಡಿ ಗೌರವಿಸಿದೆ. ರಾಮನಾಥ್ ಕೋವಿಂದ್ ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಿ, ಗೌರವ ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ. ಬಿಜೆಪಿ ಆಡಳಿತ ಪಕ್ಷ. ರಾಜ್ಯದಲ್ಲಿ ಗೋವಿದ ಕಾರಜೋಳ ಅವರನ್ನು ಕೇಳದೇ ಡಿಸಿಎಂ ಪಟ್ಟ ನೀಡಿದ್ದೇವೆ. ಅಷ್ಟೇ ಅಲ್ಲದೆ ಆನೇಕಲ್ ನಾರಾಯಣಸ್ವಾಮಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದೇವೆ. ಸಿದ್ದರಾಮಯ್ಯ ಯಾವತ್ತೂ ದಲಿತರನ್ನು ಬೆಳೆಯಲು ಬಿಡಲಿಲ್ಲ ಎಂದರು.
ರಾಜ್ಯದಲ್ಲಿ ಪ್ರವಾಹ, ನೆರೆ ಸಂದರ್ಭದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅಗತ್ಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ತಮ್ಮ ಜಿಲ್ಲೆಗಳಲ್ಲೇ ಇದ್ದು ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ ಎಂದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಏನು ಮಾತನಾಡುವುದಿಲ್ಲ, wait and see: ಸಚಿವ ಜಗದೀಶ್ ಶೆಟ್ಟರ್