ಚಿತ್ರದುರ್ಗ: ಬಿಸಿ ಊಟ ಸೇವಿಸಿ 81ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚನ್ನಬಸಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಬಿಸಿ ಊಟ ಸೇವಿಸಿದ ತಕ್ಷಣ ಹೊಟ್ಟೆ ಉರಿಯಿಂದ ಮಕ್ಕಳು ಬಳಲಿದ್ದಾರೆ. ಊಟ ಸೇವಿಸಿರುವ 250ಕ್ಕೂ ಹೆಚ್ಚು ಮಕ್ಕಳ ಪೈಕಿ 81 ಜನ ಮಕ್ಕಳು ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರಾದ ಮಕ್ಕಳನ್ನು ಚಳ್ಳಕೆರೆ ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇನ್ನೂ ಕಳೆದ ಜುಲೈ 17ರಂದು ಇದೇ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 70 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದ ಘಟನೆ ಮಾಸುವ ಮುನ್ನವೆ ಮತ್ತೆ 80 ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿರುವ ಘಟನೆ ಮತ್ತೊಮ್ಮೆ ಮರುಕಳಿಸಿದೆ.
ಇನ್ನೂ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷಿಸಿದ ಪರಿಣಾಮ ಈ ಘಟನೆ ಮರುಕಳಿಸಿದ್ದು, ಬಿಸಿ ಊಟದಲ್ಲಿ ಹಲ್ಲಿ ಬಿದ್ದಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಇದರಿಂದ ಮಕ್ಕಳ ಪೋಷಕರು ಶಾಲೆಯ ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ಪ್ರಕರಣ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,ಪೊಲೀಸರು ಪರಿಶೀಲನೆ ನಡೆಸಿದ್ದಾರೆ.