ಚಿತ್ರದುರ್ಗ: ಬರಗಾಲದಲ್ಲಿ ಗ್ರಾಮೀಣ ಪ್ರದೇಶದ ಜನ್ರಿಗೆ ನೆರವಿಗೆ ಬರುವ ನರೇಗಾ ಉದ್ಯೋಗಾಕಾಂಕ್ಷಿಗಳ ಜಾಬ್ ಕಾರ್ಡ್ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಬಳಿ ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ತಾ.ಪಂ. ಇಒಗೆ ತಾಕೀತು ಮಾಡಿದರು.
ಹೊಸದುರ್ಗ ಪಟ್ಟಣ ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿ ಅನುಷ್ಠಾನ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಶಾಸಕರು ಈ ಎಚ್ಚರಿಕೆ ನೀಡಿದ್ದಾರೆ. ಫಲಾನುಭವಿಗಳ ಗುರಿ ಮುಟ್ಟಬೇಕೆಂದು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸಬೇಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೆಲಸ ಅರಸಿ ವಲಸೆ ಹೋಗಿದ್ದ ಜನರು ಕೊರೊನಾ ವೈರಸ್ ಪರಿಣಾಮ ಮರಳಿ ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಆದ್ದರಿಂದ ಅವರಿಗೆ ಜಾಬ್ ಕಾರ್ಡ್ ನೀಡಿ ಕೆಲಸವಿಲ್ಲದ ಕೈಗಳಿಗೆ ಕೆಲಸ ಕೊಡುವ ಕಾರ್ಯಕ್ಕೆ ಮುಂದಾಗಬೇಕೆಂದು ಶಾಸಕರು ಸೂಚಿಸಿದ್ದಾರೆ.