ಚಳ್ಳಕೆರೆ(ಚಿತ್ರದುರ್ಗ): ಐತಿಹಾಸಿಕ ಹಾಗೂ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಕ್ಯಾತೆ ದೇವರ ಕಳ್ಳಿ ಮುಳ್ಳಿನ ಗುಡಿಯ ಮೇಲಿನ ಕಳಶ ಕೀಳುವ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ಅದ್ಧೂರಿಯಾಗಿ ನೆರವೇರಿತು. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಕಾಡುಗೊಲ್ಲರು ಒಂದು ವಾರಗಳಿಂದ ವಿವಿಧ ಪೂಜಾ ಕಾರ್ಯಕ್ರಮದೊಂದಿಗೆ ಕಳ್ಳಿ ತಂದು ಗುಡಿ ನಿರ್ಮಿಸುತ್ತಾರೆ. ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಳ್ಳಿ ಮುಳ್ಳಿನ ದೇವರ ಗುಡಿಯನ್ನೇರಿ ಗೊಲ್ಲ ಸಮುದಾಯದ ಭಕ್ತರು ದೇವರ ಕಳಶ ಕೀಳಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದರು. ಏರಿ ಚೌಳೂರು ಗ್ರಾಮದ ಎಸ್.ರಾಜು ಎಂಬುವವರು ಮೊದಲು ಕಳಶ ಕಿತ್ತು ಸಂಭ್ರಮಿಸಿದರು. ಗುಡಿಯಿಂದ ಕೆಳಗಿಳಿದಾಗ ಶಾಸಕ ಟಿ.ರಘುಮೂರ್ತಿ ಮಾಲೆ ಹಾಕಿ ಸನ್ಮಾನಿಸಿದರು.
ಕಾಡುಗೊಲ್ಲರ ಆರಾಧ್ಯದೈವ ಕ್ಯಾತೆ ದೇವರು. ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಇಂದಿಗೂ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯದ ದ್ಯೋತಕವಾಗಿದೆ. ಈ ದೇವರ ಜಾತ್ರೆಗೆ ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ, ಕಲ್ಯಾಣ ದುರ್ಗ, ಬಳ್ಳಾರಿ, ಹಾವೇರಿ, ಧಾರವಾಡ, ಶಿವಮೊಗ್ಗ, ಮೈಸೂರು, ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ವಿಶಿಷ್ಠ ಆಚರಣೆಯನ್ನು ಕಣ್ತುಂಬಿಕೊಂಡರು.
ವಿಶಿಷ್ಟ ಆಚರಣೆ: ಕಾಡುಗೊಲ್ಲ ಬುಡಕಟ್ಟಿನ 13 ಗುಡಿಕಟ್ಟಿನವರು(ಸಹೋದರರು) ನವಣೆ ಮತ್ತು ಹುರುಳಿ (ವ್ರತ) ಹಾಗೂ ಮನೆ ಶುದ್ಧೀಕರಿಸಿ ಆಚರಣೆ ಆರಂಭಿಸುತ್ತಾರೆ. ಜಾತ್ರೆ ಮುಗಿಯುವವರೆಗೆ ಹುರುಳಿ, ನವಣೆ ಬಳಸುವುದಾಗಲಿ, ಮುಟ್ಟುವುದಾಗಲಿ ಮತ್ತು ನವಣೆ -ಹುರುಳಿ ಬೆಳೆದ ಹೊಲದಲ್ಲಿ ಹೋಗದಂತೆ ಕಟ್ಟುನಿಟ್ಟಿನ ವ್ರತವನ್ನು ಇಂದಿಗೂ ಪಾಲಿಸುತ್ತಾರೆ.
ಐತಿಹಾಸಿಕ ಹಿನ್ನೆಲೆ ಹೀಗಿದೆ..: ಐತಿಹಾಸಿಕ ಕ್ಯಾತಪ್ಪ ದೇವರು ಕಾಡುಗೊಲ್ಲರಿಗೆ ಒಲಿಯುವ ಮೊದಲು ರೆಡ್ಡಿ ಜನಾಂಗದ ಹೇಮಾರೆಡ್ಡಿ ಮತ್ತು ಭೀಮಾರೆಡ್ಡಿ ಎಂಬುವವರಿಗೆ ಒಲಿದಿತ್ತಂತೆ. ಇದರಿಂದ ರೆಡ್ಡಿಗಳಿಗೆ ಶ್ರೀಮಂತಿಕೆ ಬಂತು. ಆಗ ಅಲಕ್ಷ್ಯದಿಂದ ದೇವರನ್ನು ಹುರುಳಿ-ನವಣೆ ಕಣಜದಲ್ಲಿ ಹಾಕಿ ಮುಚ್ಚಿದರಂತೆ. ರೆಡ್ಡಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಕ್ಯಾತೆ ದೇವರು ಕಾಡುಗೊಲ್ಲರ ದನಗಾಹಿ ಬೊಮ್ಮಲಿಂಗನಿಗೆ ಒಲಿದು ಬಂದು ಗೊಲ್ಲರ ತಾಣದಲ್ಲಿ ನೆಲೆ ನಿಲ್ಲುತ್ತಾನೆ ಎಂಬುವುದು ಇತಿಹಾಸ.
ಗುಡಿ ಸುತ್ತಲೂ ಕಳ್ಳಿಯ ಬೇಲಿ: ಗೊಲ್ಲರು ಇಂದಿಗೂ ಜಾತ್ರೆ ನಡೆಯುವ ಸಂದರ್ಭದಲ್ಲಿ ಹರುಳಿ-ನವಣೆಯ ಕಟ್ಟು ನಿಟ್ಟಿನ ವ್ರತ ಆಚರಿಸುತ್ತಾರೆ. ಕಾರೆ, ಬಾರೆ ಮುಳ್ಳಿನ ಗಿಡಗಳು ಹಾಗೂ ಹತ್ತಿ, ಕಳ್ಳಿ, ಬೇವಿನ (ದೇವರ) ಮರವನ್ನು ಕಡಿದು ನೆಲಕ್ಕೆ ಮುಟ್ಟಿಸದಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಸಾಗಿಸುತ್ತಾರೆ. ಕ್ಯಾತಪ್ಪ ದೇವರ ಮೂಲ ನೆಲೆಯಾದ ಚನ್ನಮ್ಮ ನಾಗತಿಹಳ್ಳಿ ಗ್ರಾಮದ ದೇವರ ಗುಡಿ ಸುತ್ತಲೂ ಕಳ್ಳಿಯ ಬೇಲಿ ಹಾಕುತ್ತಾರೆ.
ಗುಡಿ ನಿರ್ಮಾಣ: ಒಕ್ಕಲು ಮಕ್ಕಳು ಸಜ್ಜೆರೊಟ್ಟಿ, ಶೇಂಗಾ ಚಟ್ನಿ, ಅನ್ನ ಮೊಸರಿನ ಬುತ್ತಿ ಕಟ್ಟಿಕೊಂಡು ಗುಡಿ ನಿರ್ಮಿಸಲು ಹೋಗುತ್ತಾರೆ. ಜಾತ್ರೆ ನಡೆಯುವ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಬೆಳಗಿನ ಜಾವ 7 ಗಂಟೆ ಸುಮಾರಿನಲ್ಲಿ 18 ರಿಂದ 20 ಅಡಿ ಎತ್ತರದ ಬಾರೆ, ಕಾರೆ, ಬಂದ್ರೆ, ತುಗ್ಗಲಿಮೋರು ಮತ್ತು ಎರದ ಕಳ್ಳಿಯಿಂದ 20 ನಿಮಿಷಕ್ಕೆ ದೇವರ ಒಕ್ಕಲ ಮಕ್ಕಳು (ಬೊಮ್ಮನಗೊಲ್ಲರು ಹಾಗೂ ಕೋಣನ ಗೊಲ್ಲರು ) ಕಳ್ಳಿ ಮುಳ್ಳಿನಿಂದ ಗುಡಿ ನಿರ್ಮಿಸಿ ಅದರ ತುದಿಗೆ ಕಂಚಿನ ಪಂಚ ಕಳಶಗಳನ್ನು ಏರಿಸುತ್ತಾರೆ.
ಚನ್ನಮ್ಮ ನಾಗತಿಹಳ್ಳಿ ಕ್ಯಾತಪ್ಪದೇವರು, ಪರಿವಾರದ ದೇವರುಗಳಾದ ಬಂಜಗೆರೆ ವೀರಣ್ಣ, ಈರಬಡಕ್ಕ, ಆಂಧ್ರಪ್ರದೇಶ ಕಲ್ಯಾಣ ದುರ್ಗ ತಾಲೂಕಿನ ತಾಳಿ ದೇವರು, ಬತವಿನ ದೇವರು, ಕೋಣನ ದೇವರು ಸೇರಿದಂತೆ ಎಲ್ಲಾ ಪೆಟ್ಟಿಗೆ ದೈವಗಳನ್ನು ಜಾತ್ರೆ ಜರುಗುವ ವಸಲು ದಿಬ್ಬದ ಕಳ್ಳಿಮುಳ್ಳಿನ ಬೇಲಿಗುಡಿ ಒಳಗೆ ಪ್ರತಿಷ್ಠಾಪಿಸುತ್ತಾರೆ. ಅಲ್ಲಿ ಮೊದಲಿಗೆ ಗಂಗಾ ಪೂಜೆ, ಹಾವಿನ ಗೂಡು, ಕರವಿನ ಗೂಡು, ಮಜ್ಜನಭಾವಿ, ಹುತ್ತದ, ಕೋಣನ ಪೂಜೆ ಮುಗಿಸಿದ ನಂತರ ಗುಂಡಿ ತೆಗೆದು ಮಧ್ಯರಾತ್ರಿ ಮಡಿಯಿಂದ ಐದು ಜನ ಮುತ್ತೈದೆಯರು ಒನಕೆಯಿಂದ ನವಣೆ ಕುಟ್ಟಿ ದೇವರಿಗೆ ನೈವೇದ್ಯ ಅರ್ಪಿಸಿ, ಭಕ್ತರು ವ್ರತ ಅಳಿಯುತ್ತಾರೆ.
ಚಳ್ಳಕೆರೆ ತಾಲೂಕಿನ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ನಡೆಯುವ ಜಾತ್ರೆಗೆ ಬಂದ ಭಕ್ತರು ವಿವಿಧ ಹರಕೆಯನ್ನು ತೀರಿಸುತ್ತಾರೆ. ಜ.9ರಂದು ಮಧ್ಯಾಹ್ನ 4-30ಕ್ಕೆ ಸರಿಯಾಗಿ ತಣ್ಣೀರಿನಲ್ಲಿ ಸ್ನಾನ ಮಾಡಿದ ದೇವರ ಒಕ್ಕಲಿನ ಏಳೆಂಟು ಜನ ಈರಗಾರರು ಬರಿ ಮೈ-ಬರಿಗಾಲಲ್ಲಿ ನಾ ಮುಂದು ತಾ ಮುಂದು ಎಂದು ಕೇಕೆ ಹೊಡೆಯುತ್ತಾ ಕಳ್ಳಿ ಮುಳ್ಳಿನಿಂದ ನಿರ್ಮಿಸಿದ ದೇವರ ಗುಡಿಯನ್ನು ಎದ್ದು ಬಿದ್ದು ಹೊರಳಾಡುತ್ತಾ ಹುರುಪಿನಿಂದ ಗುಡಿ ಮೇಲೆ ಹತ್ತಿ ಕಳಶ ಕಿತ್ತು ಭಕ್ತಿ ಪರಾಕಾಷ್ಠೆ ಮೆರೆಯುವುದು ವಿಶೇಷವಾಗಿದೆ.
ಇದನ್ನೂ ಓದಿ: ಡ್ರೋನ್ ಕ್ಯಾಮರಾದಲ್ಲಿ ಗವಿಸಿದ್ದೇಶ್ವರ ಜಾತ್ರೆ ವೈಭವ ನೋಡಿ..