ಚಿತ್ರದುರ್ಗ: ಕೊರೊನಾ ಕಾಟದಿಂದ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಈಗ ಕೊಳೆ ರೋಗ ಮತ್ತೊಂದು ಷಂಕಷ್ಟ ತಂದೊಡ್ಡಿದೆ. ಕಷ್ಟಪಟ್ಟು ಬೆಳೆಸಿದ್ದ ಈರುಳ್ಳಿ ಬೆಳೆಗೆ ಕೊಳೆ ರೋಗ ಅಂಟಿತೆಂದು ಬೇಸತ್ತ ರೈತನೋರ್ವ ಟ್ರ್ಯಾಕ್ಟರ್ನಿಂದ ಬೆಳೆ ನಾಶ ಮಾಡಿರುವ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಕಂಡುಬಂದಿದೆ.
ಚಳ್ಳಕೆರೆ ತಾಲೂಕಿನ ವಿಡಪಕುಂಟೆ ಗ್ರಾಮದ ರೈತ ವೀರಣ್ಣ ತಮ್ಮ ಹೊಲದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಸಾಲಶೂಲ ಮಾಡಿ ಬೆಳೆದ ಈರುಳ್ಳಿಗೆ ಕೊಳೆ ರೋಗ ಬಂದಿದ್ದು, ಬಾಯಿಗೆ ಬಂದ ತುತ್ತು ಕೈಗೆ ಸಿಗಲಿಲ್ಲವೆಂದು ಮನನೊಂದು ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದಾರೆ.
ಈರುಳ್ಳಿ ಬೀಜ ಬಿತ್ತನೆ ಮಾಡಿದ ಎರಡು ತಿಂಗಳವರೆಗೆ ಬೆಳೆಗೆ ಯಾವುದೇ ರೋಗವಿರಲಿಲ್ಲ. ಆದರೆ ಈರುಳ್ಳಿ ಗೆಡ್ಡೆ ಕಟ್ಟುವ ಸಮಯದಲ್ಲೇ ಪೈರಿನ ತುದಿ ಬಾಗಿ ನೆಲೆಕ್ಕೆ ಕುಸಿಯುತ್ತಿದೆ. ಅಷ್ಟೇ ಅಲ್ಲದೆ ಬೆಳೆ ಕೊಳೆಯುತ್ತಿದ್ದು, ವಿಡಪನಕುಂಟೆ, ಭತ್ತಯ್ಯನಹಟ್ಟಿ, ನನ್ನಿವಾಳ, ಬೆಳೆಗೆರೆ ಗ್ರಾ.ಪಂ ವ್ಯಾಪ್ತಿಯ ರೈತರು ಆತಂಕಗೊಂಡಿದ್ದಾರೆ.
ಈ ಕುರಿತು ಮಾತನಾಡಿದ ರೈತ ವೀರಣ್ಣ, ನಾನು 5 ಎಕರೆ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದೆ. ಈರುಳ್ಳಿ ಗೆಡ್ಡೆ ಕಟ್ಟುವ ಸಮಯದಲ್ಲೇ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ವಿವಿಧ ಔಷಧಿಗಳನ್ನು ಸಿಂಪಡಣೆ ಮಾಡಿದ್ದೇನೆ. ಆದರೂ ಸಹ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡುತ್ತಿದ್ದೇನೆ. ಈ ಬಾರಿ ಕೂಡ ಈರುಳ್ಳಿ ನಮ್ಮನ್ನು ಸಾಲದ ಸುಳಿಗೆ ದೂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.