ಚಿತ್ರದುರ್ಗ: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಕಾವು ಹೆಚ್ಚಾಗಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಬಿಜೆಪಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಬಿಜೆಪಿ ಆಗ್ನೇಯ ಪದವೀಧರರ ಕ್ಷೇತ್ರದ ಪ್ರಚಾರ ಆರಂಭಿಸಲಾಯಿತು. ಹಿರಿಯೂರು ನಗರದಲ್ಲಿರುವ ತುಳಸಿ ನಾರಾಯಣ್ ರಾವ್ ಕಲ್ಯಾಣ್ ಮಂಟಪದಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರದ ಸಭೆಯಲ್ಲಿ ಸಮಾಜಕಲ್ಯಾಣ ಸಚಿವ ಸಚಿವ ಶ್ರೀ ರಾಮುಲು ಭಾಗಿಯಾಗಿ ಮತಯಾಚಿಸಿದರು.
ಇಂದು ನಡೆದ ಪ್ರಚಾರ ಸಭೆಯಲ್ಲಿ ಶಾಸಕಿ ಪೂರ್ಣಿಮಾ ಗೈರಾಗಿದ್ದು, ಬಿಜೆಪಿಯಲ್ಲಿ ಎಲ್ಲಾ ಸರಿ ಇಲ್ಲ ಎಂಬುದು ಎದ್ದು ಕಾಣುತ್ತಿತ್ತು. ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಶ್ರೀನಿವಾಸ್ ಕೂಡ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿ ಪಕ್ಷ ಮಾತ್ರ ಚಿದಾನಂದ ಗೌಡ ಎಂಬ ಅಭ್ಯರ್ಥಿಗೆ ಮಣೆ ಹಾಕಿರುವುದರಿಂದ ಚುನಾವಣೆಯಿಂದ ಶಾಸಕಿ ಪೂರ್ಣಿಮಾ ದೂರ ಉಳಿದಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
ಈಗಾಗಲೇ ಟಿಕೆಟ್ ಸಿಗದ ಕಾರಣ ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣ ಕಣಕ್ಕೆ ಇಳಿರುವುದು ಬಿಜೆಪಿ ನಾಯಕರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ವೈ.ಎ ನಾರಾಯಣ ಸ್ವಾಮಿ, ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಸಹಜ, ಸಿಎಂ ಬಿಎಸ್ವೈ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಕಟೀಲ್ ಇಬ್ಬರೂ ಸೇರಿ ಚಿದಾನಂದ ಗೌಡರನ್ನು ಅಭ್ಯರ್ಥಿ ಎಂದು ಆಯ್ಕೆ ಮಾಡಿದ್ದಾರೆ. ಸ್ಥಳೀಯ ಶಾಸಕರನ್ನು ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಕರೆದಿದ್ದು, ನಮ್ಮ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ. ಆದ್ರೆ ಪಕ್ಷದ ವಿರುದ್ಧ ನಿಂತವರು ಪಕ್ಷದವರಲ್ಲ, ಬಿಜೆಪಿ ಅಭ್ಯರ್ಥಿಗೆ ನೇರ ಎದುರಾಳಿ ಆಗುವುದು ಅವರ ಭ್ರಮೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಮಧ್ಯೆ ಶಾಸಕಿ ಪೂರ್ಣಿಮಾರ ಪತಿ ಶ್ರೀನಿವಾಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಬಿಜೆಪಿ ಅಭ್ಯರ್ಥಿ ಚಿದಾನಂದ ಅವರಿಗೆ ಮುಳುವಾಗುತ್ತಾ ಎಂದು ಕಾದು ನೋಡಬೇಕಿದೆ.