ಚಿತ್ರದುರ್ಗ: ಜಿಲ್ಲೆಯಲ್ಲಿ ಭಾರಿ ಮಳೆಯಾದ ಪರಿಣಾಮ ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಇದೇ ವೇಳೆ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದ ಘಟನೆ ಪಂಡರಹಳ್ಳಿಯಲ್ಲಿ ನಡೆದಿತ್ತು.
ಬಳಿಕ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹ ಹುಡುಕುವಲ್ಲಿ ನಿರತರಾಗಿದ್ದರು. ಸತತ ಹುಡುಕಾಟದ ಬಳಿಕ ಇದೀಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಪಂಡರಹಳ್ಳಿ ಗ್ರಾಮದ ನಾಗಮ್ಮ (45) ಎಂಬಾಕೆ ಜಮೀನಿನ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ರಾತ್ರಿ ಹಳ್ಳ ದಾಟಲು ಹೋದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾಳೆ.
ಭಾರಿ ಮಳೆಯಾಗಿದ್ದರಿಂದ ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಇದನ್ನು ಗಮನಿಸದೆ ನೀರಿಗಿಳಿದ ನಾಗಮ್ಮ ಕೊಚ್ಚಿಕೊಂಡು ಹೋಗಿದ್ದು, ಮರುದಿನ ಬೆಳಗ್ಗೆ ಅದೇ ಹಳ್ಳದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಈ ಘಟನೆ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.