ಚಿತ್ರದುರ್ಗ: ಕಳೆದ 3 ತಿಂಗಳ ಹಿಂದೆ ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದ ಘಟನೆ ಇದೀಗ ರೋಚಕ ತಿರುವು ಪಡೆದುಕೊಂಡಿದೆ.
ಮಕ್ಕಳಿಗೆ ತೋರುವ ಪ್ರೀತಿ–ವಾತ್ಸಲ್ಯದಲ್ಲಿ ಆಗಿರುವ ತಾರತಮ್ಯಕ್ಕೆ ಪುತ್ರಿಯೇ ವಿಷವಿಟ್ಟು ಪೋಷಕರನ್ನು ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಘಟನೆ ನಡೆದು ಮೂರು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ. 17 ವರ್ಷದ ಬಾಲಕಿಯನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದು ಬಾಲಮಂದಿರಕ್ಕೆ ಹಸ್ತಾಂತರಿಸಿದ್ದಾರೆ. ಮುದ್ದೆಯಲ್ಲಿ ಬೆರೆತಿದ್ದ ಕೀಟನಾಶಕ ಸಾವಿಗೆ ಕಾರಣವಾಗಿದೆ ಎಂಬುದು ದೃಢಪಟ್ಟಿದೆ.
ಜುಲೈ 12ರ ರಾತ್ರಿ ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದ ನಾಲ್ವರು ಮೃತಪಟ್ಟ ಘಟನೆ ನಡೆದಿತ್ತು. ಬಾಲಕಿಯ ತಂದೆ ತಿಪ್ಪನಾಯ್ಕ (45), ತಾಯಿ ಸುಧಾಬಾಯಿ (40), ಅಜ್ಜಿ ಗುಂಡಿಬಾಯಿ (80) ಹಾಗೂ ಸಹೋದರಿ ರಮ್ಯಾ (16) ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಹುಲ್ (19) ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ.
ಕೊಲೆ ಆರೋಪ ಎದುರಿಸುತ್ತಿರುವ ಬಾಲಕಿ ಮುದ್ದೆ ಸೇವಿಸಿರಲಿಲ್ಲ. ಕುಟುಂಬದ ಸದಸ್ಯರು ಸೇವಿಸಿದ್ದ ಮುದ್ದೆ, ಅನ್ನ–ಸಾರು, ಇದಕ್ಕೆ ಬಳಕೆ ಮಾಡಿದ ಪದಾರ್ಥ ಹಾಗೂ ಪಾತ್ರೆಗಳನ್ನು ದಾವಣಗೆರೆಯ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆತಿರುವ ಸಂಗತಿ ಪ್ರಯೋಗಾಲಯದ ವರದಿಯಿಂದ ಗೊತ್ತಾಗಿತ್ತು.
ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಬಾಲಕಿಯನ್ನು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ