ಚಿತ್ರದುರ್ಗ : ಮತಾಂತರ ವಿಚಾರವಾಗಿ ಅಳಿಯನೇ ಮಾವನ ವಿರುದ್ಧ ದೂರು ಕೊಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಬುಡ್ಗಜಂಗಮ ಕಾಲೋನಿ ನಿವಾಸಿಯಾದ ಮಾರಪ್ಪ ಎಂಬುವರು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ? ಕಳೆದ ಒಂದುವರೆ ವರ್ಷದ ಹಿಂದೆ ಮಾರಪ್ಪ ಎಂಬುವರಿಗೆ ಸ್ವತಃ ಮಾರಪ್ಪನ ಮಾವರಾದ ವಸಂತಕುಮಾರ್ ಮತ್ತು ರಾಮಚಂದ್ರಪ್ಪ ಎಂಬುವರು ಆಮಿಷವೊಡ್ಡಿ ಬಲವಂತವಾಗಿ ದೀಕ್ಷಾ ಸ್ಥಾನ ಎಂಬ ಹೆಸರಿನಲ್ಲಿ ನೀರಿನಲ್ಲಿ ಮುಳುಗಿಸಿ ಇಂದಿನಿಂದ ನೀವು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂದು ಮತಾಂತರ ಮಾಡಿಸಿದರು.
ಕ್ರಿಶ್ಚಿಯನ್ ಧರ್ಮ ಪದ್ಧತಿಯಂತೆ ಮಾರಪ್ಪ ಮತ್ತು ಸರಳಾ ಅವರಿಗೆ ಜುಲೈ 6, 2020ಕ್ಕೆ ವಿವಾಹ ಮಾಡಿಸಿದ್ದಾರೆ. ಆದರೆ, ಇವರಿಬ್ಬರಿಗೆ ಕ್ರಿಶ್ಚಿಯನ್ ಧರ್ಮದಲ್ಲಿ ಮುಂದುವರಿಯಲು ಸಾಧ್ಯವಾಗದ ಕಾರಣ ವಿವಾಹ ಆದಾಗಿನಿಂದಲೂ ಹಿಂದೂ ಧರ್ಮದ ದೇವರನ್ನು ಪೂಜೆ ಮಾಡುತ್ತಾ ಜೀವನ ನಡೆಸಿದ್ದಾರೆ.
ನಂತರ ಮಾರಪ್ಪ ಡಿ.2, 2021 ರಂದು ತನ್ನ ಹೆಂಡತಿ ಸರಳಾ ಅವರನ್ನು ಹೆರಿಗೆಗೆಂದು ತವರು ಮನೆಗೆ ಕಳುಹಿಸಿದ್ದಾರೆ. ನಂತರ ಮಗು ಹುಟ್ಟಿರುವುದನ್ನು ಸಹ ಮಾರಪ್ಪನಿಗೆ ತಿಳಿಸಿರುವುದಿಲ್ಲ. ಆಗ ಮಾರಪ್ಪ ಬೇರೆಯವರ ಮುಖಾಂತರ ಮಗು ಹುಟ್ಟಿರುವುದನ್ನು ತಿಳಿದುಕೊಂಡು ತನ್ನ ಅಣ್ಣನ ಜೊತೆ ಹೆಂಡತಿಯನ್ನು ನೋಡಲು ಹೊಸದುರ್ಗದ ತನ್ನ ಮಾವ ವಸಂತ್ ಕುಮಾರ್ ಮನೆಗೆ ಜ.18-2021ಕ್ಕೆ ಬಂದಾಗ ಮನೆಯ ಒಳಗೆ ಬಿಟ್ಟುಕೊಳ್ಳದೇ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ನೀವೆಲ್ಲ ಸೈತಾನ್‌ಗಳು, ನೀವು ಹಿಂದೂ ದೇವರನ್ನು ಪೂಜೆ ಮಾಡುವವರು, ನಿಮ್ಮನ್ನು ಮನೆಯ ಒಳಗೆ ಬಿಟ್ಟುಕೊಳ್ಳುವುದಿಲ್ಲ. ನೀವು ನಿಮ್ಮ ದೇವರನ್ನು ಹಾಗೂ ನಿಮ್ಮ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸಿದರೆ ಮಾತ್ರ ನಿಮ್ಮ ಹೆಂಡತಿ ಮಗುವನ್ನು ನೋಡಬಹುದು ಹಾಗೂ ನಿನ್ನೊಂದಿಗೆ ಕಳಿಸುತ್ತೇವೆ ಎಂದು ಮತ್ತೆ ಬಲವಂತದ ಮತಾಂತರಕ್ಕೆ ಒತ್ತಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾರಪ್ಪ ಮತ್ತು ಸಹೋದರರು ಮತಾಂತರಗೊಳ್ಳಲು ಒಪ್ಪದ ಕಾರಣ ವಸಂತ್ ಕುಮಾರ್ ಅವರು ಮಾರಪ್ಪನ ಜೊತೆ ಕೈ ಕೈ ಮಿಲಾಯಿಸಿದ್ದಾರೆ. ನನ್ನ ಹೆಂಡತಿ ನಮ್ಮ ಮನೆಗೆ ಬರಬೇಕು. ಬಲವಂತವಾಗಿ ಮತಾಂತರಕ್ಕೆ ಯತ್ನಿಸಿರುವ ಮತ್ತು ನಾವು ನಂಬಿರುವ ದೇವರ ಫೋಟೋಗಳು ಹರಿದು ಹಾಕಿ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಇವರ ಮೇಲೆ ಕಾನೂನು ರೀತಿಯ ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಮಾರಪ್ಪ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನನ್ನ ಮಾವನಾದ ವಸಂತಕುಮಾರ್ ಮತ್ತು ರಾಮಚಂದ್ರಪ್ಪ ಇಬ್ಬರು ಸೇರಿ ನೀನು ಕ್ರಿಶ್ಚಿಯನ್ ಧರ್ಮದಂತೆ ಮದುವೆಯಾಗಿದ್ದು, ಕ್ರಿಶ್ಚಿಯನ್ ಧರ್ಮದಂತೆ ನಡೆದುಕೊಳ್ಳಬೇಕು. ನೀನು ಬೇರೆ ಯಾವುದೇ ದೇವರನ್ನು ಪೂಜೆ ಮಾಡುವಂತಿಲ್ಲ. ನೀನು ಪೂಜೆ ಮಾಡುವ ನಿಮ್ಮ ಸುಂಕ್ಲಮ್ಮ, ಮಾರಮ್ಮ, ದುರ್ಗಮ್ಮ ಇವೆಲ್ಲವೂ ಪಿಶಾಚಿಗಳು, ಸೈತಾನ್‌ಗಳು. ಇವುಗಳನ್ನು ಪೂಜೆ ಮಾಡುವುದರಿಂದ ನೀನು ನರಕಕ್ಕೆ ಹೋಗುತ್ತಿಯಾ ಎಂದು ಬೈದು ನಮ್ಮ ದೇವರ ಫೋಟೋಗಳನ್ನು ಹರಿದು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿರುತ್ತಾರೆ.
ಶಾಸಕ ಗೂಳಿಹಟ್ಟಿಗೆ ಮನವಿ : ಬಲವಂತದ ಮತಾಂತರ ವಿರುದ್ಧವಾಗಿ ರಾಜ್ಯಾದ್ಯಂತ ಧ್ವನಿಯೆತ್ತಿದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಹೈದ್ರಾಬಾದ್-ಕರ್ನಾಟಕ ಅಲೆಮಾರಿ ಬುಡ್ಗಜಂಗಮ್ ಜಾಗೃತಿ ಸೇವಾ ಸಂಘದ ಅಧ್ಯಕ್ಷ ಸಣ್ಣಮಾರೆಪ್ಪ ಹಾಗೂ ತಂಡ ಭೇಟಿ ಮಾಡಿ, ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ನಮಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಶಾಸಕ ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಬಲವಂತವಾಗಿ ಮತಾಂತರ ಆಗುತ್ತಿದೆ ಎಂದು ಹೇಳುತ್ತಿದ್ದೆ. ಆದರೆ, ಯಾರೂ ನಂಬುತ್ತಿರಲಿಲ್ಲ. ವಿರೋಧ ಪಕ್ಷದ ನಾಯಕರು ಕೂಡ ಯಾರಾದರು ಈ ಬಗ್ಗೆ ದೂರು ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ್ದುಂಟು. ಆದರೆ, ಒಂದೇ ಕುಟುಂಬದ ಸದಸ್ಯರು ಇಲ್ಲಿ ಬಲವಂತವಾಗಿ ಮತಾಂತರ ಮಾಡಿದ್ದಾರೆ. ದಾಖಲೆ ಸಮೇತ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದಕ್ಕಿಂತ ತಾಜಾ ಉದಾಹರಣೆ ಬೇಕಿದೆಯಾ ಎಂದು ತಿಳಿಸಿದರು.
ಇದನ್ನೂ ಓದಿ: ಚಳಿ ಜ್ವರಕ್ಕೆ ಹಾಸಿಗೆ ಹಿಡಿಯುತ್ತಿರುವ ಜನ: ಕೊರೊನಾ ಭಯಕ್ಕೆ ಮೆಡಿಕಲ್, ಖಾಸಗಿ ಆಸ್ಪತ್ರೆಗಳಿಂದಲೇ ಔಷಧ!
ಇನ್ನೂ ಹೊಸದುರ್ಗ ಪಟ್ಟಣದ ನಂಜಯ್ಯನಕೆರೆ ಬಡಾವಣೆಯ, ವಸಂತ್ ಕುಮಾರ್, ರಾಮಚಂದ್ರಪ್ಪ, ಸುಧಾಕರ್, ಮಂಜುನಾಥ್, ಸಂಕಪ್ಪ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ