ಚಿತ್ರದುರ್ಗ: ಬರದಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಆದರೂ ಲಾಕ್ಡೌನ್ ಬಿಸಿ ತಟ್ಟಿದ್ದು, ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಹಾಗೂ ಮಾರಾಟ ಮಾಡಲು ಪ್ರಯತ್ನಿಸಿ ಹೈರಾಣಾಗಿದ್ದಾರೆ. ಹೀಗಾಗಿ ಬೆಳೆದ ಫಸಲನ್ನು ಮಾರುಕಟ್ಟೆಯಲ್ಲಿ ಬಿಟ್ಟು ರೈತರು ತೆರಳಿರುವ ಘಟನೆಯೂ ಕೂಡಾ ನಡೆದಿದೆ.
ರೈತರು ಎಪಿಎಂಸಿ ಮಾರುಕಟ್ಟೆಗೆ ತಂದ ಬದನೆ ಕಾಯಿ, ಟೊಮ್ಯಾಟೋ, ಈರುಳ್ಳಿ, ಕುಂಬಳಕಾಯಿ, ಬೀನ್ಸ್, ಮೆಣಸಿನಕಾಯಿ, ಕ್ಯಾರೆಟ್, ಸೌತೆಕಾಯಿ ಸೇರಿದಂತೆ ಎಲ್ಲಾ ತರಕಾರಿಗಳನ್ನು ಮಧ್ಯವರ್ತಿಗಳು ಕೊಳ್ಳುವ ಮೂಲಕ ಬೆಲೆ ನಿಗದಿಪಡಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಟೊಮ್ಯಾಟೊ ಕೆ.ಜಿಗೆ 10 ರೂಪಾಯಿ, ಬೀನ್ಸ್ ಕೆ.ಜಿಗೆ 60 ರೂಪಾಯಿ, ಬದನೆಕಾಯಿ ಕೆ.ಜಿಗೆ 40 ರೂಪಾಯಿ, ಈರುಳ್ಳಿ 15 ರೂಪಾಯಿಗೆ ನಾಲ್ಕು ಕೆ.ಜಿ, ಮೆಣಸಿನಕಾಯಿ ಕೆ.ಜಿಗೆ 40 ರೂಪಾಯಿ, ಹಾಗಲಕಾಯಿ ಕೆ.ಜಿ 80 ರೂಪಾಯಿ, ಬೆಂಡೇಕಾಯಿ ಕೆ.ಜಿಗೆ 40 ರೂಪಾಯಿ, ಬೆಳ್ಳುಳ್ಳಿ ಕೆ.ಜಿಗೆ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಲಾಕ್ ಡೌನ್ ನೆಪದಲ್ಲಿ ದಲ್ಲಾಳಿಗಳು ಅಮಾಯಕ ರೈತರನ್ನು ಮೋಸಮಾಡುತ್ತಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ರೈತರ ಒಕ್ಕೊರಲ ಮನವಿಯಾಗಿದೆ.