ಚಿತ್ರದುರ್ಗ: ಕೋಟೆನಾಡಿನ ಜೀವನಾಡಿ ಐತಿಹಾಸಿಕ ವಿವಿ ಸಾಗರ ಡ್ಯಾಂ ಸುಮಾರು 89 ವರ್ಷಗಳ ಬಳಿಕ ಮೈ ದುಂಬಿ ಹರಿಯುತ್ತಿದೆ. ಕೋಡಿ ಬಿದ್ದು ಹರಿಯುತ್ತಿರುವ ನೀರಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರವ ವಾಣಿ ವಿಲಾಸ ಸಾಗರ ತುಂಬಿ ಹರಿಯುತ್ತಿದೆ. ಇದರ ಪರಿಣಾಮವಾಗಿ ಹಲವು ವರ್ಷಗಳ ಬಳಿಕ ಡ್ಯಾಂ ತುಂಬಿದ್ದು, ಜಿಲ್ಲೆಯ ಜನರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ: ಈ ಹಿಂದೆ 128 ಅಡಿ ನೀರು ಹರಿದು ಬಂದಿದ್ದೇ ದೊಡ್ಡ ಸಾಧನೆಯಾಗಿತ್ತು. ಆದರೆ, ಈ ಬಾರಿ 135 ಅಡಿ ನೀರು ಡ್ಯಾಂನಲ್ಲಿ ಶೇಖರಣೆ ಆಗಿರುವುದು ಅತಿದೊಡ್ಡ ಇತಿಹಾಸವಾಗಿದೆ. ಈ ಹಿಂದೆ ಎರಡು ತಲೆಮಾರಿನ ಜನರು ಈ ಥರ ಡ್ಯಾಂ ತುಂಬಿದ್ದನ್ನು ಕಣ್ಣಾರೆ ಕಂಡಿದ್ದರು. ಅದನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಇಷ್ಟೊಂದು ನೀರು ಹರಿದು ಬಂದಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ವಿವಿಎಸ್ ಡ್ಯಾಂ ಹೀಗೆ ಮೈದುಂಬಿ ತುಳುಕುತ್ತಿರುವುದಕ್ಕೆ ಜಲಾಶಯ ಕೋಡಿ ಬಿದ್ದಿದೆ. ಕೋಡಿ ಬಿದ್ದು ಹರಿಯುತ್ತಿರುವ ಡ್ಯಾಂನ ನೀರಂತು ಯಾವುದೋ ಸಮುದ್ರದ ನೀರಿನ ರೀತಿ ಹರಿಯುತ್ತಿರುವುದು ಪ್ರವಾಸಿಗರನ್ನು ಸೆಳೆಯುತ್ತಿದೆ. ಗಗನಚುಕ್ಕಿ, ಬರಚುಕ್ಕಿ, ಜೋಗ ಜಲಪಾತದ ನೀರಿನ ರಭಸದ ರೀತಿ ರಸ್ತೆ ಮೇಲೆ ಕೋಡಿ ಬಿದ್ದು ಹರಿಯುತ್ತಿರುವ ನೀರನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ನಿನ್ನೆ ಭಾನುವಾರ ಆಗಿದ್ದ ಕಾರಣ ಅನೇಕ ಪ್ರವಾಸಿಗರು ತಮ್ಮ ಕುಟುಂಬ ಸಮೇತ ಆಗಮಿಸಿ ಡ್ಯಾಂ ಹಾಗೂ ಕೋಡಿ ಬಿದ್ದು ಹರಿಯುತ್ತಿರುವ ನೀರನ್ನು ಕಂಡು ಆನಂದಿಸಿದ್ದಾರೆ.
ಇದನ್ನೂ ಓದಿ: 23 ವರ್ಷಗಳ ಬಳಿಕ ಕಣ್ವ ಡ್ಯಾಂ ಭರ್ತಿ.. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ಮಟ್ಟ ಹೀಗಿದೆ