ಚಿತ್ರದುರ್ಗ: ಸರ್ಕಾರಕ್ಕೆ 1.67 ಕೋಟಿ ರೂ. ಕಂದಾಯ ಹಣ ವಂಚಿಸಿ ತಲೆಮರೆಸಿಕೊಂಡಿದ್ದ ಆರೋಪಿ ಜಾಮೀನು ಸಿಗದ ಕಾರಣ ತಾನೇ ಬಂದು ನ್ಯಾಯಾಲಯಕ್ಕೆ ಶರಣಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಶ್ರೀರಾಯ್ ಅಸೋಸಿಯೇಟ್ ಮಾಲೀಕ ಹಾಗೂ ದಾಸ್ತಾವೇಜು ಬರಹಗಾರ ಸಿ.ಮಂಜುನಾಥ್ ಯಾದವ್ (36) ನ್ಯಾಯಾಲಯಕ್ಕೆ ಶರಣಾದ ಆರೋಪಿಯಾಗಿದ್ದಾರೆ. ಕೆ-2 ಚಲನ್ ತಿದ್ದಿ ಸರ್ಕಾರಕ್ಕೆ 1,67,71,170 ರೂ. ಕಂದಾಯ ವಂಚಿಸಿರುವ ಆರೋಪ ಈತನ ಮೇಲಿದೆ.
ಆರೋಪಿ ಮಂಜುನಾಥ್ ಅವರನ್ನು ಜ.14ರಂದು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಆತನಿಂದ ಲ್ಯಾಪ್ ಟಾಪ್, ಸಿಪಿಯು, ಮೊಬೈಲ್ ಹಾಗೂ ಹೆಚ್ಚಿನ ತನಿಖೆಗಾಗಿ ಜಿಲ್ಲಾ ಉಪನೋಂದಾಣಾಧಿಕಾರಿ ಕಚೇರಿಯ 3 ಸಿಪಿಯುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಹೆಚ್ಚಿನ ಪರೀಶಿಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (FSL) ವಿಭಾಗಕ್ಕೆ ಕಳುಸಿದ್ದಾರೆ.
ಚಿತ್ರದುರ್ಗ ಉಪನೋಂದಾಣೆ ಕಚೇರಿಯಲ್ಲಿ 2020 ಅಕ್ಟೋಬರ್ 28 ರಿಂದ 2021 ಆಗಸ್ಟ್ 31ರವರೆಗಿನ ಅವಧಿಯಲ್ಲಿ ಸಹಿ ಮಾಡಿರುವ ಎಲ್ಲ ದಸ್ತಾವೇಜುಗಳು ಕಾನೂನು ಬಾಹಿರವಾಗಿವೆ. ಮಂಜುನಾಥ್ ಯಾದವ್ ಚಿತ್ರದುರ್ಗದ ಆಕ್ಸಿಸ್, ಮತ್ತು ಐಸಿಐಸಿಐ ಬ್ಯಾಂಕ್ ಶಾಖೆಗಳ ಖಾತೆಯಿಂದ ದಸ್ತಾವೇಜುಗಳ ಮೌಲ್ಯಕ್ಕೆ ಅನುಗುಣವಾಗಿ ಸರ್ಕಾರಿ ಶುಲ್ಕವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಾನಾ ಲೆಕ್ಕ ಶೀರ್ಷಿಕೆಗಳಲ್ಲಿ ಇ ಪೇಮೆಂಟ್ ಮೂಲಕ ಕಡಿಮೆ ಶುಲ್ಕ ಪಾವತಿಸಿ ಸರಿಯಾದ ಶುಲ್ಕ ಪಾವತಿಸಿರುವಂತೆ ಕೆ-2 ಚಲನ್ ತಿದ್ದಿ ಸರ್ಕಾರಕ್ಕೆ 1,67,71,170 ರೂ.ಕಂದಾಯ ವಂಚಿಸಿದ್ದಾನೆ ಎಂದು ಜಿಲ್ಲಾ ಉಪನೋಂದಾಣಾಧಿಕಾರಿ ರವಿಂದ್ರ ಪೂಜಾರ್ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಚಿತ್ರದುರ್ಗ ಡಿವೈಎಸ್ಪಿ ಪಾಡುರಂಗ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದರು. ವಿಷಯ ತಿಳಿದ ಮಂಜುನಾಥ್ ತಲೆಮರೆಸಿಕೊಂಡು ಚಿತ್ರದುರ್ಗ ಕೋರ್ಟ್ ಹಾಗೂ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರು. ಆದರೆ, ಎರಡು ಕೋರ್ಟ್ಗಳಲ್ಲಿ ಜಾಮೀನು ಸಿಗದ ಕಾರಣ ಜ.11 ರಂದು ಬಂದು ಕೋರ್ಟ್ಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೋಟಿ ಬೆಲೆ ಬಾಳುವ ಚಿನ್ನ, ವಜ್ರ ಖಚಿತ ಐಫೋನ್ ಕದ್ದ ಕಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದ್ದೇ ರೋಚಕ..!