ಚಿಕ್ಕಮಗಳೂರು: ಗಂಡನಿಗೆ ಕುಡಿಯಬೇಡ ಅಂದಿದ್ದೆ ತಪ್ಪಾಯ್ತು. ಮನೆ ಮಾಲೀಕನಿಗೆ ಮಕ್ಕಳನ್ನು ಕೆಲಸಕ್ಕೆ ಇಟ್ಕೊಳೋದು ತಪ್ಪಲ್ವಾ ಅಂತಾ ಪ್ರಶ್ನೆ ಮಾಡಿದ್ದೇ ಕೆಂಗಣ್ಣಿಗೆ ಕಾರಣವಾಯಿತು. ಇದರ ಪರಿಣಾಮ, ಪತಿಯೆ ಮನೆಯ ಮಾಲೀಕನೊಂದಿಗೆ ಸೇರಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಅತ್ತೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿ ನಡೆದಿದೆ.
ತಾಲೂಕಿನ ಹಿರೇಮಗಳೂರು ನಿವಾಸಿ ಮಮತಾ ನೊಂದ ಮಹಿಳೆ. ಈಕೆ ಬೆಂಗಳೂರಲ್ಲಿ ಮನೆ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳ ಜೊತೆ ಗಂಡನನ್ನೂ ಸಾಕುತ್ತಿದ್ದಳು. ಆದರೆ ಈಕೆಯ ತಾಯಿ ಯಲ್ಲಮ್ಮ ಮಾತ್ರ ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಈ ಯಲ್ಲಮ್ಮನ ಮಗನ ಮಗುವನ್ನು ಬಾಡಿಗೆ ಮನೆಯಾತ ಕೆಲಸಕ್ಕೆ ಇಟ್ಟುಕೊಂಡಿದ್ದ. ಬಟ್ಟೆ ತೊಳೆಯೋದು, ಮದ್ಯ ತರಿಸೋದು, ಹಾಲು ಹಾಕಿಸೋದು, ಹೊಲ-ಗದ್ದೆ ತೋಟದ ಕೆಲಸ ಮಾಡಿಸೋದನ್ನು ಮನೆ ಮಾಲೀಕ ಮಾಡಿಸುತ್ತಿದ್ದನಂತೆ. ವಿಷಯ ತಿಳಿದು ಬೆಂಗಳೂರಿಂದ ಬಂದ ಮಮತಾ ಮನೆ ಮಾಲೀಕರಿಗೆ ಪ್ರಶ್ನಿಸಿದ್ದಾರೆ.
ಓದೋ ಹುಡುಗನಿಗೆ, ಹೀಗೆ ಮಾಡಿದರೇ ಅವನ ಭವಿಷ್ಯ ಹಾಳಾಗೋದಿಲ್ಲವಾ ಎಂದು ಕೇಳಿದ್ದಾರಂತೆ. ಅಷ್ಟಕ್ಕೆ ಮನೆ ಮಾಲೀಕ ಸತೀಶ್ ಪಿತ್ತ ನೆತ್ತಿಗೇರಿತ್ತು. ಅಜ್ಜಿ ದೇವರಂತೆ ಇದ್ದಾಳೆ. ಇವಳ್ಯಾರು ಗಯ್ಯಾಳಿ ಎಂದು ಮಮತಾ ಪತಿ ಸುರೇಶ್ ಜೊತೆ ಸೇರಿ ಕೆಲಸ ಮಾಡುತ್ತಿದ್ದ ಬಾಲಕನ್ನು ಹೊರತುಪಡಿಸಿ ಎಲ್ಲರನ್ನ ಮನೆಯಿಂದಲೇ ಹೊರ ಹಾಕಿದ್ದಾನೆ. ಮಮತಾ, ತಾಯಿ-ಮಕ್ಕಳೊಂದಿಗೆ ಉಟ್ಟ ಬಟ್ಟೆಯಲ್ಲಿಯೇ ಹೊರಬಂದಿದ್ದು, ಬೇರೆ ದಾರಿ ಕಾಣದೆ ದಾರಿ ಹೋಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಮನೆ ಮಾಲೀಕ ಮಮತಾ ಹಾಗೂ ತಾಯಿ-ಮಕ್ಕಳನ್ನು ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಹಾಕಿದ ಮೇಲೆ ಇವರೆಲ್ಲರೂ ಬಸ್ ಸ್ಟ್ಯಾಂಡ್, ಪಾರ್ಕ್ನಲ್ಲಿ ಎರಡು ದಿನ ಕಾಲ ಕಳೆದಿದ್ದಾರೆ. ಇವರನ್ನು ದಾರಿಯಲ್ಲಿ ಗಮನಿಸಿದ ಪರಿಚಯಸ್ಥ ಮಹಿಳೆಯೊಬ್ಬರು ಇವರನ್ನ ವಿಚಾರಿಸಿ ಕೆಲ ದಿನಗಳಿಂದ ಮನೆಯಲ್ಲಿಟ್ಟುಕೊಂಡು ಸಾಕುತ್ತಿದ್ದು, ಅಕ್ಕ-ಪಕ್ಕದವರ ಕೊಟ್ಟ ಬಟ್ಟೆ ಹಾಕಿಕೊಂಡು ದಿನ ದೂಡುತ್ತಿದ್ದಾರೆ.
ಇನ್ನು ವೃದ್ಧೆ ಯಲ್ಲಮ್ಮಗೆ ಎರಡೂ ಕಾಲುಗಳು ವೆರಿಕೋಸ್ ಖಾಯಿಲೆಗೆ ಒಳಗಾಗಿವೆ. ವೈದ್ಯರು ಎರಡೂ ಕಾಲನ್ನ ಮಂಡಿಯಿಂದ ಕೆಳಗೆ ಕತ್ತರಿಸಬೇಕು ಎಂದಿದ್ದಾರೆ. ಆದರೆ, ಉಟ್ಟ ಬಟ್ಟೆಯಲ್ಲೇ ಹೊರ ಬಂದ ಮಮತಾ ಭವಿಷ್ಯದ ದಾರಿ ಕಾಣದೆ ನ್ಯಾಯಕ್ಕಾಗಿ ಪೊಲೀಸರು ಹೇಳಿದಾಗೆಲ್ಲಾ ಸ್ಟೇಷನ್ ಹೋಗಿ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಅಷ್ಟೆ ಅಲ್ಲದೇ ಆ ಹಿರಿ ಜೀವ ಕೂಡ ಇಳಿ ವಯಸ್ಸಲ್ಲಿ ಕಂಡವರ ಮನೆಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಹಾಗೆ ಹೊರಗಡೆಯಾದ್ರೂ ನೆಮ್ಮದಿಯಿಂದ ಬದುಕೋಣ ಅಂತಾ ಇದ್ದರೆ ಮಮತಾಳ ಪತಿ ಬಿಡುತ್ತಿಲ್ಲವಂತೆ. ಕುಡಿದು ಬಂದು ಗಲಾಟೆ ಮಾಡೋದು, ಹೊಡೆಯೋದು ಮಾಡ್ತಿದ್ದಾನಂತೆ. ಇದರಿಂದ ಬೇಸತ್ತು ಹೋಗಿರೋ ಮಮತಾ ಪೊಲೀಸರಿಗೂ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಮಾತ್ರ ಸ್ಪಂದಿಸುತ್ತಿಲ್ಲ ಎಂದೂ ತಮ್ಮ ಅಳಲು ತೋಡಿಕೊಂಡಿದ್ದಾರೆ.