ಚಿಕ್ಕಮಗಳೂರು: ಭಾರತದ ಖ್ಯಾತ ಕಾನೂನು ತಜ್ಞ ಹಾಗೂ ಸ್ವೈಸಿ ಐಪಿ ಬ್ಲಾಗ್ ಸಂಸ್ಥಾಪಕ ಪ್ರೋ. ಶಮಂದ್ ಬಶೀರ್ (43) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬಶೀರ್ ಅವರ ಮೃತದೇಹ ಚಿಕ್ಕಮಗಳೂರು ತಾಲೂಕಿನ ದತ್ತಾಪೀಠದ ಬಳಿ ಸ್ಕೋಡಾ ಕಾರಿನೊಳಗೆ ಪತ್ತೆಯಾಗಿದೆ.
ಜುಲೈ 28 ರಂದು ತಮ್ಮ ಆರೋಗ್ಯದ ತಪಾಸಣೆಗಾಗಿ ಚಿಕ್ಕಮಗಳೂರಿಗೆ ಆಗಮಿಸಿದ್ದ ಅವರು ನಗರದ ಐ ಜಿ ರಸ್ತೆಯಲ್ಲಿನ ಖಾಸಗಿ ಲಾಡ್ಜ್ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ತಮ್ಮದೇ ಸ್ಕೋಡಾ ಕಾರಿನಲ್ಲಿ ಬಾಬಾಬುಡನ್ಗಿರಿಗೆ ಹೋಗಿದ್ದು, ಎರಡು ದಿನ ಕಳೆದರೂ ಹೊಟೇಲ್ಗೆ ಬಾರದ ಕಾರಣ ಅಲ್ಲಿನ ಸಿಬ್ಬಂದಿ ಅವರ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.
ಆಗಸ್ಟ್ 7 ರಂದು ಚಿಕ್ಕಮಗಳೂರು ಪೊಲೀಸರು ಪ್ರೋ. ಶಮಂದ್ ಬಶೀರ್ಗಾಗಿ ತೀವ್ರವಾದ ಶೋಧ ಕಾರ್ಯದಲ್ಲಿ ತೊಡಗಿದ್ದಾಗ ಇನಾಂ ದತ್ತಾತ್ರೇಯ ಪೀಠದ ಮಾಣಿಕ್ಯಧಾರಾಗೆ ಹೋಗುವ ರಸ್ತೆಯಲ್ಲಿ ಶಮಂದ್ ಬಶೀರ್ ಅವರ ಕಾರು ಪತ್ತೆಯಾಗಿದೆ. ಕಾರಿನೊಳಗೆ ಅವರು ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಗಿರಿ ಪ್ರದೇಶದಲ್ಲಿ ಕಳೆದ ಒಂದು ವಾರದಿಂದಲೂ ಧಾರಾಕಾರ ಮಳೆ, ಮಂಜು, ಗಾಳಿ, ವಿಪರೀತ ಚಳಿ ಇರುವ ಕಾರಣ ಕಾರಿನಲ್ಲೇ ಬಶೀರ್ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಶಮಂದ್ ಬಶೀರ್ ಅವರು ಕಾನೂನು ಪದವೀಧರರಾಗಿದ್ದು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಪಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಬಶೀರ್ ಎಲ್ಲರ ಗಮನ ಸೆಳೆದಿದ್ದರು. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.